Bhumi Amla: ಸಾಸಿವೆ ಗಾತ್ರದ ನೆಲನೆಲ್ಲಿಯಿಂದ ಆರೋಗ್ಯಕ್ಕೆ ಬೆಟ್ಟದಷ್ಟು ಪ್ರಯೋಜನ: ಯಕೃತ್ತಿನ ಆರೋಗ್ಯಕ್ಕೆ ಇದು ಬೆಸ್ಟ್ ಮೆಡಿಸಿನ್
ನೆಲನೆಲ್ಲಿಯ ಎಂದರೆ ಏನು ಎಂಬುದು ಈಗಿನ ಜಮಾನದವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಅನೇಕರಿಗೆ ನೆಲನೆಲ್ಲಿಯ ಪರಿಚಯವಾಗಿದೆ. ಬಹುಷಃ ನಿಮ್ಮಲ್ಲಿಯೂ ಅನೇಕರು ನೆಲನೆಲ್ಲಿಯ ಕಷಾಯ ಸೇವನೆ ಮಾಡಿದ್ದಿರಬಹುದು. ಸಾಕಷ್ಟು ಉತ್ತಮ ಅಂಶಗಳನ್ನು ಹೊಂದಿರುವ ಸಾಸಿವೆ ಗಾತ್ರದ ನೆಲನೆಲ್ಲಿಯು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು.
ಅದೇ ರೀತಿ ಈ ನೆಲನೆಲ್ಲಿಯು ಯಕೃತ್ತಿನ ಆರೋಗ್ಯವನ್ನೂ ಸುಧಾರಿಸುವ ಕೆಲಸ ಕೂಡ ಮಾಡುತ್ತದೆ.
ಸಾಮಾನ್ಯ ನೆಲ್ಲಿಕಾಯಿ ಮರದಂತೆ ಇವುಗಳು ಬೆಳೆದಿರುವುದಿಲ್ಲ. ಹೆಸರೇ ಹೇಳಿದಂತೆ ನೆಲದಲ್ಲಿ ಅಂದರೆ ಭೂಮಿಯಲ್ಲಿ ಆಗುವ ನೆಲ್ಲಿಯಿದು. ಮನೆಯಲ್ಲಿ ಕಳೆ ಗಿಡಗಳ ಜೊತೆಯಲ್ಲಿ ಚಿಕ್ಕ ಚಿಕ್ಕದಾಗಿ ಕಾಣುವ ನೆಲನೆಲ್ಲಿ ಗಿಡದ ಎಲೆಗಳು ಸಾಮಾನ್ಯ ನೆಲ್ಲಿ ಎಲೆಯನ್ನು ಹೋಲುತ್ತವೆ. ಎಲೆಗಳ ಕೆಳಭಾಗದಲ್ಲಿ ನೀವು ಚಿಕ್ಕ ಗಾತ್ರದ ನೆಲ್ಲಿಯನ್ನು ಕಾಣಬಹುದಾಗಿದೆ. ಇವುಗಳು ಅಂತಹ ಯಾವುದೇ ರುಚಿಯನ್ನು ಹೊಂದಿರುವುದಿಲ್ಲ. ಆದರೆ ಯಕೃತ್ತಿನ ಆರೋಗ್ಯ ಸುಧಾರಿಸುವ ಕಾರ್ಯದಲ್ಲಿ ಮಾತ್ರ ಹೀರೋಗಳಂತೆ ಕಾರ್ಯ ನಿರ್ವಹಿಸುತ್ತವೆ. ಹಾಗೂ ಮೂತ್ರಪಿಂಡದ ಆರೋಗ್ಯಕ್ಕೂ ನೆಲನೆಲ್ಲಿಯ ಕೊಡುಗೆ ಇದೆ. ಹೀಗಾಗಿ ಈ ನೆಲನೆಲ್ಲಿಯನ್ನು ನಾವು ಗಿಡಮೂಲಿಕೆ ಎಂದು ಹೇಳಬಹುದು.
ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ
ಸಾಮಾನ್ಯ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವಿದೆ. ಜೀರ್ಣಾಂಗ್ಯ ವ್ಯವಸ್ಥೆಯನ್ನು ಸುಧಾರಿಸುವ ಶಕ್ತಿ ಇದೆ ಎಂದೆಲ್ಲ ಕೇಳಿರುತ್ತೀರಿ. ಆದರೆ ನೆಲನೆಲ್ಲಿಯ ಉಪಯೋಗಗಳ ಬಗ್ಗೆ ಹೆಚ್ಚಿನ ಜನರಿಗೆ ಇಂದಿಗೂ ಮಾಹಿತಿಯಿಲ್ಲ. ಆದರೆ ಆಯುರ್ವೇದ ವಿಜ್ಞಾನದಲ್ಲಿ ಮಹತ್ವದ ಸ್ಥಾನ ಪಡೆದಿರುವ ಗಿಡಮೂಲಿಕೆಗಳ ಪೈಕಿ ಇದೂ ಕೂಡ ಒಂದಾಗಿದೆ.
ಆರ್ಯುವೇದ ವಿಜ್ಞಾನದಲ್ಲಿ ನೆಲನೆಲ್ಲಿಯನ್ನು ಯಕೃತ್ತಿನ ಮದ್ದು ಎಂದೇ ಕರೆಯಲಾಗುತ್ತದೆ. ನೆಲನೆಲ್ಲಿಯಲ್ಲಿ ಇರುವ ಹೆಪಟೊಪ್ರೊಟೆಕ್ಟಿವ್ ಗುಣಗಳು ಕಾಮಾಲೆಯಂತಹ ರೋಗಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತವೆ. ಸಾಮಾನ್ಯ ನೆಲ್ಲಿಕಾಯಿಗೆ ಹೋಲಿಕೆ ಮಾಡಿದರೆ ನೆಲನೆಲ್ಲಿಯೇ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೆಲ್ಲಿಕಾಯಿಯು ವಿಟಮಿನ್ ಸಿ ಅಂಶವನ್ನು ಹೊಂದಿದ್ದು ನಮ್ಮ ಒಟ್ಟಾರೆ ಆರೋಗ್ಯ ಕ್ಷೇಮವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಆದರೆ ನೆಲನೆಲ್ಲಿಯು ಯಕೃತ್ತಿನ ಅನಾರೋಗ್ಯ, ಜ್ವರ ಹಾಗೂ ಕಾಮಾಲೆಗೆ ಚಿಕಿತ್ಸೆ ನೀಡುವುದು ಸೇರಿದಂತೆ ಮನುಷ್ಯನ ದೇಹದ ನಿರ್ದಿಷ್ಟ ಅಂಗಗಳಿಗೆ ಉಂಟಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಶಕ್ತಿಯನ್ನು ಹೊಂದಿರುತ್ತವೆ. ಇದು ಮಾತ್ರವಲ್ಲದೇ ವಿವಿಧ ಚರ್ಮ ಸಂಬಂಧಿ ಸಮಸ್ಯೆಗಳಿಗೂ ನೆಲನೆಲ್ಲಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ.
ಮುಟ್ಟಿನ ಸಂಬಂಧಿ ಸಮಸ್ಯೆಗೂ ಪರಿಹಾರ
ಈ ನೆಲನೆಲ್ಲಿಯನ್ನು ನೈಸರ್ಗಿಕ ಹಸಿವುವರ್ಧಕ ಎಂದು ಕರೆಯಬಬಹುದಾಗಿದೆ. ಮಧುಮೇಹ, ಮುಟ್ಟಿನ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಅನುಭವಿಸುವವರು ಹಾಗೂ ಮೂತ್ರ ಸಂಬಂಧಿ ಸೋಂಕುಗಳನ್ನು ಹೊಂದಿರುವವರಿಗೂ ಅರ್ಯುವೇದದಲ್ಲಿ ನೆಲನೆಲ್ಲಿ ಸೇವನೆಗೆ ಹೇಳಲಾಗುತ್ತದೆ. ನೆಲನೆಲ್ಲಿಯ ಬಹುಮುಖಿ ಉಪಯೋಗಗಳಿಂದಾಗಿ ಇವುಗಳನ್ನು ಅತ್ಯಮೂಲ್ಯ ಗಿಡಮೂಲಿಕೆ ಎಂದು ಹೇಳಬಹುದಾಗಿದೆ.
ಅಸ್ತಮಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ನೆಲನೆಲ್ಲಿಯು ಸಾಮಾನ್ಯ ಶೀತ, ಗಂಟಲು ನೋವು, ಕೆಮ್ಮು ಹಾಗೂ ಜ್ವರದ ಲಕ್ಷಣಗಳನ್ನು ನಿವಾರಿಸುತ್ತದೆ. ಉಸಿರಾಟವನ್ನು ಸರಾಗಗೊಳಿಸುವ ವಿಶೇಷ ಶಕ್ತಿ ನೆಲನೆಲ್ಲಿಗೆ ಇದೆ. ಇದೇ ಕಾರಣಕ್ಕೆ ಕೋವಿಡ್ ಸಂದರ್ಭದಲ್ಲಿ ನೆಲನೆಲ್ಲಿ ಭಾರೀ ಪ್ರಮಾಣದಲ್ಲಿ ಪ್ರಚಲಿತಕ್ಕೆ ಬಂದಿತ್ತು.
ಸೇವನೆಯ ಮುನ್ನ ತಜ್ಞರ ಸಲಹೆ ಪಡೆಯಿರಿ
ನೆಲನೆಲ್ಲಿಯು ಅಸಮಾನ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಈಗಾಗಲೇ ಬೇರೆ ಕಾಯಿಲೆಗಳಿಗೆ ಔಷಧಿ ಪಡೆಯುತ್ತಿರುವವರು ಇದನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಹಾಗೆಯೇ ಗರ್ಭಿಣಿಯರು ಹಾಗೂ ಹಾಲುಣಿಸುತ್ತಿರುವ ಬಾಣಂತಿಯರು ಕೂಡ ವೈದ್ಯರ ಸಲಹೆಯನ್ನು ಪಡೆಯದೇ ಇದನ್ನು ಸೇವಿಸುವುದು ಅಷ್ಟೊಂದು ಸುರಕ್ಷಿತವಲ್ಲ. ಒಮ್ಮೆ ವೈದ್ಯರ ಸಲಹೆಯನ್ನು ಪಡೆದು ಖಂಡಿತವಾಗಿಯೂ ನೀವು ಇದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬಹುದಾಗಿದೆ.