ಅವಸಾನದತ್ತ ಉರ್ದು ಭಾಷೆ – ಡಾ.ಸಬೀರಾ ಬೇಗಂ ಕಳವಳ
ಉರ್ದು ಭಾಷೆ ಒಂದೇ ಸಮುದಾಯಕ್ಕೆ ಸೀಮಿತವಲ್ಲ - ಮುದನೂರ
ಶೋಲಾ ಫೌಂಡೇಶನ್ನಿಂದ ಉರ್ದು ಭಾಷಿಕರಿಗೆ ಪ್ರೋತ್ಸಾಹ ಕಾರ್ಯಕ್ರಮ
ಉರ್ದು ಕಾವ್ಯಾತ್ಮಕವಾಗಿ ಸುಂದರ ಭಾಷೆ
Yadgiri, ಶಹಾಪುರಃ ಉರ್ದು ಭಾಷೆ ಅಳಿವಿನಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉರ್ದು ಶಾಲೆಗಳು ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಡಾ.ಸಾಬೀರ ಬೇಗಂ ಕಳವಳ ವ್ಯಕ್ತಪಡಿಸಿದರು.
ನಗರದ ಶೋಲಾ ಫೌಂಡೇಶನ್ ವತಿಯಿಂದ ಶೋಲಾ ಐಸ್ ಫ್ಯಾಕ್ಟರಿ ಬಳಿ ಸಭಾ ಭವನದಲ್ಲಿ ನಡೆದ ಉತ್ತಮ ವರದಿಗಾರರು ಹಾಗೂ ಉತ್ತಮ ಉರ್ದು ಶಿಕ್ಷಕ, ಶಿಕ್ಷಕಿಯರಿಗೆ ಸನ್ಮಾನ ಸಮಾರಂಭದಲ್ಲಿ ಉತ್ತಮ ಉರ್ದು ಶಿಕ್ಷಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಉರ್ದು ಭಾಷೆ ಕಲಿಯಲು ಪ್ರಸ್ತುತ ಮಕ್ಕಳನ್ನು ಉರ್ದು ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ನಾವೆಲ್ಲ ಉರ್ದು ಕಲಿತು ಉರ್ದು ಶಿಕ್ಷಕರಾಗಿ ಉರ್ದು ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಪ್ರಸ್ತುತ ಸ್ಥಿತಿಗತಿಯೇ ಬೇರೆ ಇದೆ. ಉರ್ದು ಶಾಲೆಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ಮುಚ್ಚುವಂತ ಸ್ಥಿತಿ ಬಂದರೆ ಅಚ್ಚರಿ ಪಡುವಂತಿಲ್ಲ ಎಂದರು.
ಉತ್ತಮ ವರದಿಗಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾನಿಪ ಅದ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಉರ್ದು ಶಾಯರಿಗೆ ಬಹು ಹೆಸರು ಮಾಡಿದ ಭಾಷೆ. ಉರ್ದು ಕಾವ್ಯಾತ್ಮಕವಾಗಿ ಬಹು ಸುಂದರ ಭಾಷೆಯೆಂದು ಹಿಂದಿನಿಂದಲೇ ಸಾಹಿತ್ಯಕವಾಗಿ ಪರಿಗಣಿಸಲಾಗಿದೆ.
ಹೈದ್ರಾಬಾದ್ ಕರ್ನಾಟಕ ಹಿಂದೆ ಉರ್ದು ಭಾಷೆ ಆಡಳಿತದಲ್ಲಿತ್ತು. ಹೀಗಾಗಿ ಈ ಭಾಗದಲ್ಲಿ ಉರ್ದು ಕವಿಗಳು ಕಾಣಬಹುದು. ಆದರೆ ಉರ್ದು ಕವಿಗಳ ರಚಿಸಿದ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಉರ್ದು ಭಾಷೆ ಉಳಿವಿಗೆ ಶ್ರಮಿಸಬೇಕಿದೆ.
ಉರ್ದು ಕವಿ ಮಿರ್ಜಾ ಗಾಲಿಬ್ ಜಗತ್ತಿನಲ್ಲಿಯೇ ಪ್ರಸಿದ್ಧ ಕವಿ. ಆತನ ಕವಿತೆಗಳು, ಹಾಡುಗಳು ನಾವು ಇಂದಿಗೆ ಕೇಳುತ್ತೇವೆ. ಆತನ ಅಭಿಮಾನಿ ವರ್ಗದಲ್ಲಿ ನಾನು ಒಬ್ಬ. ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಅವರು ಸಹ ಮಿರ್ಜಾ ಗಾಲಿಬ್ ಅವರ ಕಾವ್ಯಕ್ಕೆ ಮನಸೋತಿದ್ದರು ಎಂದರು.
ಇದೇ ಸಂದರ್ಭದಲ್ಲಿ ಉರ್ದು ಕವಿ ದಿ.ಫಜಲುರಹೆಮಾನ್ ಶೋಲಾ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಶೋಲಾ ಫೌಂಡೇಶನ್ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ವರದಿಗಾರರಾಗಿ ಮುಕ್ತಿಯಾರ ಅಹ್ಮದ್, ಮಲ್ಲಿಕಾರ್ಜುನ ಮುದ್ನೂರ, ಸಯ್ಯದ್ ಸಾದಿಕ್ ಹುಸೇನ್ ಸೇರಿದಂತೆ ಉರ್ದು ಶಿಕ್ಷಕರಾದ ಮಹ್ಮದ್ ಜಲೀಲಸಾಬ, ಶಿಕ್ಷಕಿಯರಾದ ಮೀರಜ್ ಬೇಗಂ, ಜಾಹೀದಾ ಬೇಗಂ ಕಡೆಚೂರ, ರಂಜಾನಾ ಬೇಗಂ ಗೋಗಿ, ಅಬ್ದುಲ್ ಖಾದೀರ್, ಮುಷ್ತಕ್ ಅಹ್ಮದ್ ರಂಗಂಪೇಟೆ ಇವರಿಗೆ ಉತ್ತಮ ಉರ್ದು ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶೋಲಾ ಫೌಂಡೇಶನನ ಪ್ರಧಾನ ಕಾರ್ಯದರ್ಶಿ ಸಯ್ಯದ್ ಮಿಸ್ಬಾರ್ ರಹೆಮಾನ್ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಆವದ್ ಚಾವುಶ್, ಕವಿ ಶಫಿ ಸರಮಸ್ತ್, ನಯೀಮ್ ಮಲಿಕ್, ಡಾ.ಫಸೀಹಾ ಅಂಜುಮ್ ಉಪಸ್ಥಿತರಿದ್ದರು, ಉರ್ದು ಶಿಕ್ಷಕ ಮಹ್ಮದ್ ಸಿರಾಜ್ ನಿರೂಪಿಸಿ ವಂದಿಸಿದರು.