ಜಾನುವಾರು ವಧೆಗಾಗಿ ಸಾಗಣೆ: ಐವರ ಬಂಧನ
ಜಾನುವಾರು ವಧೆಗಾಗಿ ಸಾಗಣೆ: ಐವರ ಬಂಧನ
yadgiri, ಶಹಾಪುರ: ಬಕ್ರೀದ್ ಹಬ್ಬದ ಅಂಗವಾಗಿ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಎರಡು ಆಟೋದಲ್ಲಿ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಶಹಾಪುರ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಗುರುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಡಗೇರಾ ತಾಲ್ಲೂಕಿನ ಭೀಮಣ್ಣ, ದೋರನಹಳ್ಳಿ ಗ್ರಾಮದ ಮಲ್ಲಿಕಾರ್ಜುನ, ಹಳಿಸಗರದ ಸಯ್ಯದ ಬಾದಶ್, ಮಹಮ್ಮದ ವಾಸಿಂ, ಮಹ್ಮದ್ ಆರೀಫ್ ಬಂಧಿತ ಆರೋಪಿಗಳಾಗಿದ್ದಾರೆ.
ತಾಲ್ಲೂಕಿನ ದೋರನಹಳ್ಳಿ ಗ್ರಾಮದಿಂದ 2 ಹೋರಿ, 1 ಆಕಳಿಗೆ ಕೈಕಾಲು ಕಟ್ಟಿಹಾಕಿ ಒಯ್ಯುತ್ತಿರುವದನ್ನು ಮಾಹಿತಿ ಮೇರೆಗೆ ತಿಳಿದು ಶಹಾಪುರ ಮಾರ್ಗವಾಗಿ ಸಾಗಿಸುತ್ತಿರುವದನ್ನು ಕಂಡು ವಾಗನವನ್ನು ತಡೆಯಲಾಗಿ, ಜಾನುವಾರುಗಳಿಗೆ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದು, ಅವುಗಳನ್ನು ವಧೆ ಮಾಡಲು ಒಯ್ಯುತ್ತಿರುವದನ್ನು ಪರಿಶೀಲಿಸಿಯೇ ವಾಹನ ತಡೆದು ಜಾನುವಾರುಗಳನ್ನು ರಕ್ಷಣೆ ಮಾಡಿ ಅವುಗಳನ್ನು ನಗರದ ವಿಶ್ವಮಾತಾ ಗೋಶಾಲೆಗೆ ಬಿಡಲಾಯಿತು ಎಂದು ತಾಲೂಕು ಶ್ರೀರಾಮ ಸೇನೆ ಅಧ್ಯಕ್ಷ ಶಿವಕುಮಾರ ತಿಳಿಸಿದ್ದಾರೆ.
ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ -2020 ಅಡಿಯಲ್ಲಿ ಶಹಾಪುರ ಠಾಣೆಗೆ ದೂರು ಸಲ್ಲಿಸಿದ್ದು, ಅದರನ್ವಯ ಪೊಲೀಸರು ಆರೋಪಿತರನ್ನು ಬಂಧಿಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ -2020 ಅಡಿಯಲ್ಲಿ ದಾಖಲಾಗಿರುವ ತಾಲ್ಲೂಕಿನ ಮೊದಲ ಪ್ರಕರಣ ಇದಾಗಿದೆ.