ಅಕಾಲಿಕ ಮಳೆಗೆ ಬೆಳೆ ಹಾನಿ ಸ್ಪಂಧಿಸದ ಸರ್ಕಾರ – ದರ್ಶನಾಪುರ ಆರೋಪ

ಮಳೆಗೆ ಅಪಾರ ಹಾನಿ ಭೇಟಿ ನೀಡದ ಸಚಿವರು – ದರ್ಶನಾಪುರ ಆರೋಪ
yadgiri, ಶಹಾಪುರ: ಅಕಾಲಿಕ ಮಳೆಯಿಂದ ಕೊಯ್ಲಿಗೆ ಬಂದಿದ್ದ ಭತ್ತ ನೆಲಕ್ಕುರುಳಿದೆ. ಹತ್ತಿ, ಮೆಣಸಿನಕಾಯಿ ಬೆಳೆಗೆ ಹಾನಿ ಉಂಟಾಗಿದೆ. ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರೊಬ್ಬ ಸಚಿವರಾಗಲಿ ಅಥವಾ ಹಿರಿಯ ಅಧಿಕಾರಿಗಳಾಗಲಿ ಇಂದಿಗೂ ಭೇಟಿ ನೀಡಿಲ್ಲ. ಸರ್ಕಾರ ರೈತರ ಬಗ್ಗೆ ನಿಷ್ಕಾಳಜಿ ತೋರಿಸುತ್ತಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಆರೋಪಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಸಕ್ತ ವರ್ಷ ವಾಡಿಕೆಗಿಂತ ಶೇ.72ರಷ್ಟು ಹೆಚ್ಚು ಮಳೆಯಾಗಿದೆ. ಬೆಳೆ ಹಾನಿಯ ಬಗ್ಗೆ ಒಂದು ತಂಡವು ಆಗಮಿಸಿಲ್ಲ. ಮಳೆಯಿಂದ ಮನೆ, ಬೆಳೆ ಕಳೆದುಕೊಂಡ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಎಂಬುವುದು ಪತ್ತೆ ಮಾಡುವ ಕೆಲಸ ಜಿಲ್ಲೆಯ ಜನತೆಗೆ ಎದುರಾಗಿದೆ ಎಂದು ಅವರು ಕಿಡಿ ಕಾರಿದರು.
ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಮೂಲಕ ಹಿಂಗಾರು ಬೆಳೆಗೆ ಮಾ.17ವರೆಗೆ ನೀರು ಹರಿಸುವ ನಿರ್ಣಯವನ್ನು ನೀರಾವರಿ ಸಲಹಾ ಸಮಿತಿ ತೆಗೆದುಕೊಂಡಿರುವುದು ಸರಿಯಲ್ಲ. ಕೊನೆ ಪಕ್ಷ ಮಾ.30ವರೆಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಕೈಗಾರಿಕೆಗೆ ನೀರು ಹರಿಸುವ ಮೊದಲು ರೈತರ ಬೆಳೆಗೆ ಹೆಚ್ಚು ನೀರು ಕೊಡಿ.
ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆ ಒಳಗೊಂಡ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಕಳೆದ ಆರು ವರ್ಷದಿಂದ ಅಧಿಕಾರ ಅನುಭವಿಸಿದ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಒಂದು ಸಲವು ಗ್ರಾಮ ಪಂಚಾಯಿತಿ ಸಮಸ್ಯೆಗಳಿಗೆ ಸ್ಪಂಧಿಸಿಲ್ಲ. ಅಲ್ಲದೆ ಶಾಸಕ ನಿಧಿಯನ್ನು ಕೇವಲ, ಮಂದಿರ, ಸಮುದಾಯ ಭವನ ಮುಂತಾದವುಗಳಿಗೆ ನೀಡಿದರು. ಆದರೆ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಅನುದಾನ ಒದಗಿಸಲಿಲ್ಲ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಗ್ರಾಮ ಪಂಚಾಯತ್ ಬಗ್ಗೆ ಸಾಕಷ್ಟು ತಿಳಿದವರಾಗಿದ್ದು, ಜನಸೇವೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಗ್ರಾಮೀಣ ಭಾಗದಿಂದಲೇ ಬಂದವರಾಗಿದ್ದು, ಅವರಿಗೆ ಪಂಚಾಯತಿ ಮಟ್ಟದ ಸಮಸ್ಯೆಗಳು ಗೊತ್ತಿವೆ. ಗ್ರಾಮ ಸಮಸ್ಯೆಗಳಿಗೂ ಸ್ಪಂಧಿಸುತ್ತಾ ಬಂದಿದ್ದಾರೆ. ಅಂತವರಿಗೆ ಮತ ನೀಡಬೇಕಿದೆ. ಗ್ರಾಮ ಅಭಿವೃದ್ಧಿಗೆ ಶಿವಾನಂದ ಮರತೂರ ಅವರನ್ನು ಮತದಾರರು ಈ ಸಲ ಬೆಂಬಲಿಸಲಿದ್ದಾರೆ.
ಸದನದಲ್ಲಿ ಒಮ್ಮೆಯು ಸ್ಥಳೀಯ ಸಂಸ್ಥೆಯ ಸಮಸ್ಯೆಗಳ ಬಗ್ಗೆ ಚಕಾರ ಎತ್ತದ ಬಿ.ಜಿ.ಪಾಟೀಲ್ ಅವರನ್ನು ಈ ಬಾರಿ ಮತದಾರರು ಕೈಬಿಡಲಿದ್ದಾರೆ. ಶಹಾಪುರ ಮತಕ್ಷೇತ್ರದಲ್ಲಿ 27 ಗ್ರಾಮ ಪಂಚಾಯಿತಿ, ನಗರ ಸಭೆ ಹೀಗೆ ಒಟ್ಟು 347 ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಮತವು ಕಾಂಗ್ರೆಸ್ ಅಭ್ಯರ್ಥಿಗೆ ಬೀಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.