Home

ರಾಮಯ್ಯನ ಬುದ್ಧಿವಂತಿಕೆ ನೋಡಿ ಸಾಕ್ಷಾತ್ ತಿರುಪತಿ ತಿಮ್ಮಪ್ಪ ಬೆರಗು

ಭಕ್ತನ ಬುದ್ಧಿವಂತಿಕೆ ಕಂಡು ತಿಮ್ಮಪ್ಪ ಮೂಗಿನ ಮೇಲೆ ಕೈ ಇಟ್ಕೊಂಡಿದ್ದ.!

ದಿನಕ್ಕೊಂದು ಕಥೆ

ತಿಮ್ಮಪ್ಪನು ಮೂಗಿನ ಮೇಲೆ ಕೈ ಇಟ್ಟಿದ್ದು..

ರಾಮಪುರ ಎಂಬ ಊರಿನಲ್ಲಿ ರಾಮಯ್ಯ ಮತ್ತು ರಾಜಲಕ್ಷ್ಮೀ ಎಂಬ ದಂಪತಿಗಳಿದ್ದರು. ರಾಮಯ್ಯ ನಾಸ್ತಿಕ ಮತ್ತು ಜಿಪುಣ, ರಾಜಲಕ್ಷ್ಮೀ ದೈವಭಕ್ತಿ ಮತ್ತು ಉದಾರ ಗುಣವುಳ್ಳವಳು. ಅವರು ಬಡವರು, ಅವರ ಆಸ್ತಿ ಎಂದರೆ ಒಂದು ಕಾಮಧೇನುವಿನಂತ ಹಸು. ಅದರ ಜತೆಯಲ್ಲಿ ಒಂದು ಮುದಿ ಹಸು, ಆ ಸೀಮೆ ಹಸುವು ಯಥೇಚ್ಛವಾಗಿ ಕೊಡುವ ಹಾಲಿನಿಂದಲೇ, ಅವರ ಜೀವನ ಸಾಗುತ್ತಿತ್ತು.

ಹೀಗೆ ಇರಬೇಕಾದರೆ ಒಂದು ಸಾರಿ ಆ ಹಸುವು ಕಾಯಿಲೆಯಿಂದ ನರಳಲು ಪ್ರಾರಂಭಿಸಿತು. ರಾಮಯ್ಯ ಏನೇನೋ ಔಷಧ ಕೊಡಿಸುತ್ತಾನೆ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅದರ ಹಾಲು ಕೂಡ ಕಡಿಮೆಯಾಗುತ್ತಾ ಬಂತು.

ಅವರಿಗೆ ಜೀವನ ಸಾಗಿಸುವುದೇ ಕಷ್ಟವಾಯಿತು. ಇದನ್ನೆಲ್ಲಾ ನೋಡಿದ ಹೆಂಡತಿ ಗಂಡನನ್ನು ಕುರಿತು ನೋಡಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಕಟ್ಟಿಕೊಳ್ಳಿ ಹಸುವಿನ ಕಾಯಿಲೆ ವಾಸಿಯಾಗಿ ಮೊದಲಿನಂತಾದರೆ ಅದನ್ನು ಮಾರಿ ಅದರ ಅರ್ಧ ಹಣವನ್ನು ನಿನ್ನ ಹುಂಡಿಗೆ ಹಾಕುವೆನು ಎಂದು.

ರಾಮಯ್ಯನು ಹೆಂಡತಿಯ ಒತ್ತಾಯದ ಮೇಲೆ ಅದೇ ರೀತಿ ಹರಕೆ ಕಟ್ಟುತ್ತಾನೆ. ತಿರುಪತಿ ತಿಮ್ಮಪ್ಪನ ದಯೆಯಿಂದಲೋ ಅಥವಾ ಔಷಧದ ಪ್ರಭಾವದಿಂದಲೋ ಹಸುವು ಚೇತರಿಸಿಕೊಂಡಿತು. ಕೆಲವು ದಿನಗಳಲ್ಲಿ ಮೊದಲಿನಂತೆಯೇ ಆಯಿತು, ಆಗ ಹೆಂಡತಿಯು ಗಂಡನನ್ನು ಹಸುವನ್ನು ಮಾರಿ ಅರ್ಧ ಹಣವನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಲು ಒತ್ತಾಯ ಪಡಿಸುತ್ತಾಳೆ.

ಹೆಂಡತಿಯ ಒತ್ತಾಯದಿಂದ ರಾಮಯ್ಯನು ಹಸುವನ್ನು ಮಾರಲು ತೀರ್ಮಾನಿಸಿ ಸಂತೆಗೆ ಹೊಡೆದುಕೊಂಡು ಹೋಗುತ್ತಾನೆ. ಅದರ ಜತೆಯಲ್ಲಿ ಮನೆಯಲ್ಲಿದ್ದ ಮುದಿ ಹಸುವನ್ನೂ ಹೊಡೆದುಕೊಂಡು ಹೋಗುತ್ತಾನೆ.

ಸೀಮೆ ಹಸುವಿನ ಬೆಲೆ ಕೇವಲ ಒಂದು ರೂಪಾಯಿ, ಹಸುವನ್ನು ಕೊಳ್ಳಲು ತಾಮುಂದು ನಾನು ಮುಂದು ಎಂದು ಮುಗಿ ಬೀಳುತ್ತಾರೆ. ಆದರೆ ರಾಮಯ್ಯನು ಹಸುವನ್ನು ಕೊಳ್ಳುವವರಿಗೆ ಒಂದು ಕರಾರು ಇಡುತ್ತೇನೆ, ಅದೇನೆಂದರೆ ಹಸುವನ್ನು ಅದರ ಜೊತೆ ಈ ಮುದಿ ಹಸುವನ್ನು ಕೊಳ್ಳಬೇಕು ಅದರ ಬೆಲೆ ಐದು ಸಾವಿರ ಎನ್ನುತ್ತಾನೆ.

ಆಗ ಯಾರೋ ಒಬ್ಬ ಹಸುವನ್ನು ಮತ್ತು ಮುದಿ ಹಸುವನ್ನು ಕೊಂಡು ಕೊಳ್ಳುತ್ತಾನೆ. ರಾಮಯ್ಯನು 5001 ರೂಗಳನ್ನು ತೆಗೆದುಕೊಂಡು ತಿರುಪತಿಗೆ ಹೋಗಿ ತಿಮ್ಮಪ್ಪನ ಹುಂಡಿಗೆ ಐವತ್ತು ಪೈಸೆ ಹಾಕಿ ಉಳಿದ ಹಣವನ್ನು ತಾನು ತೆಗೆದುಕೊಂಡು ಮನೆಗೆ ಬರುತ್ತಾನೆ. ತಿರುಪತಿ ತಿಮ್ಮಪ್ಪ ರಾಮಯ್ಯನ ಬುದ್ಧಿವಂತಿಕೆಗೆ ಮೂಗಿನ ಮೇಲೆ ಬೆರಳು ಕೊಂಡನು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button