ನಮಗೆ ಎಂಥ ಶಾಲೆ ಬೇಕು?
ಪ್ರತಿವರ್ಷವೂ ನಮ್ಮಲ್ಲಿ ಶಾಲೆ-ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿವೆ. ವಿಶ್ವವಿದ್ಯಾಲಯಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದರ ಅರ್ಥ ನಮ್ಮಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿವೆ ಎಂದರ್ಥ.
ಈ ಬೆಳವಣಿಗೆ ಕೇವಲ ನಮ್ಮಲ್ಲಿ ಮಾತ್ರವೇ ನಡೆಯುತ್ತಿರುವ ವಿದ್ಯಮಾನವಲ್ಲ ಇಡಿಯ ಜಗತ್ತಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಹೆಚ್ಚಾಗಬೇಕೆಂಬುದು ಸರ್ಕಾರದ ಅಭಿಮತವೂ ಹೌದು, ಸಮಾಜದ ಅಭಿಪ್ರಾಯವೂ ಹೌದು. ಈ ದೃಷ್ಟಿಯಿಂದ ಮೇಲೆ ಉಲ್ಲೇಖಿಸಿದ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ನಮಗೆ ಸಂತೋಷವಾಗುವುದು ಸಹಜ. ನಾವು ಗುರಿಗೆ ಹತ್ತಿರವಾಗುತ್ತಿದ್ದೇವೆಂಬ ಹೆಮ್ಮೆ ಮೂಡುವುದು ಸಹಜ.
ಆದರೆ ಇದು ದಿಟವೆ? ವಿದ್ಯಾಕೇಂದ್ರಗಳ ಹೆಚ್ಚಳದೊಂದಿಗೆ ಸಮಾಜದಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ, ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ, ಆತಂಕದ ಕ್ಷಣಗಳು ಹೆಚ್ಚಾಗುತ್ತಿವೆ. ನೆಮ್ಮದಿಗಾಗಿ ಎಲ್ಲೆಲ್ಲೋ ಹುಡುಕಾಟಗಳು ಸಾಗಿವೆ.
ಇದರ ತಾತ್ಪರ್ಯ, ವಿದ್ಯಾವಂತರ ಹೆಚ್ಚಳಕ್ಕೂ ಸಮಾಜದ ನೆಮ್ಮದಿಗೂ ನೇರ ಸಂಬಂಧ ಇಲ್ಲವೆಂದಾಯಿತು. ಎಂದರೆ ನಾವು ಇಂದು ವಿದ್ಯೆ ಎಂದು ಯಾವುದನ್ನು ಆರಾಧಿಸುತ್ತಿದ್ದೇವೆಯೋ ಅದು ನಮಗೆ ಸುಖವನ್ನು, ನೆಮ್ಮದಿಯನ್ನು ಕೊಡುವುದರಲ್ಲಿ ವಿಫಲವಾಗುತ್ತಿದೆ ಎಂದೇ ಅರ್ಥ.
ಕೇವಲ ಅಕ್ಷರಗಳನ್ನು ಕಲಿಯುವುದೇ ವಿದ್ಯೆ ಎನಿಸದು. ಓದಲು ಬರೆಯಲು ಬಂದ ಮಾತ್ರಕ್ಕೆ ಯಾರೂ ವಿದ್ಯಾವಂತರೆನಿಸರು. ಹಾಗಾದರೆ ವಿದ್ಯೆ ಎಂದರೇನು? ವಿದ್ಯಾವಂತರು ಯಾರು? ಈ ವಿಷಯವಾಗಿ ಜಗತ್ತಿನ ನೂರಾರು ದಾರ್ಶನಿಕರು, ಚಿಂತಕರು ಆಲೋಚಿಸಿದ್ದಾರೆ, ಉಪದೇಶಿಸಿದ್ದಾರೆ.
ನಮ್ಮಲ್ಲಿ ನೈತಿಕತೆಯನ್ನು ತುಂಬಿಕೊಡುವಂಥ ವಿವರಗಳೇ ನಿಜವಾದ ವಿದ್ಯೆ. ನಮ್ಮ ಅಂತರಂಗವನ್ನೂ ಬಹಿರಂಗವನ್ನೂ ಯಾವುದು ಶುದ್ಧಗೊಳಿಸಿ, ನಮ್ಮ ಆರೋಗ್ಯವನ್ನೂ ಸಮಾಜದ ಆರೋಗ್ಯವನ್ನು ಯಾವುದು ಕಾಪಾಡುವುದೋ ಅದೇ ನೈತಿಕತೆ. ಬಸವಣ್ಣನವರು ಇಂಥ ನೈತಿಕತೆಯನ್ನು ಕುರಿತು ಸೊಗಸಾಗಿ ಹೇಳಿದ್ದಾರೆ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ.
ನಮ್ಮ ಜೀವನಕ್ಕೆ ಅವಶ್ಯಕವೆನಿಸಿರುವ ಎಲ್ಲ ಮೌಲ್ಯಗಳನ್ನೂ ಈ ವಚನ ಸಂಕೇತಿಸುತ್ತದೆ. ಮನೆಯ ಒಳಗೂ ಹೊರಗೂ ಬದುಕನ್ನು ನಿಲ್ಲಿಸುವಂಥದ್ದೇ ದಿಟವಾದ ವಿದ್ಯೆ, ಶಿಕ್ಷಣ. ಇಂಥ ವಿದ್ಯೆಯನ್ನು ಕಲಿಸುವಂಥ ಶಾಲೆಗಳ ಸಂಖ್ಯೆ ಹೆಚ್ಚಲಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.