ಕಥೆ

ದಾನವಾಗಿ ನೀಡಿದ ಬ್ರೆಡ್ ನಲ್ಲಿ ರಕ್ತ ಬಾರದಿರಲಿ.! ಅದ್ಭುತ ಸಂದೇಶ ಓದಿ

ಭ್ರಷ್ಟಾಚಾರದಲ್ಲಿ ನಾವೇ ನಂಬರ್ ಒನ್..!

ಭ್ರಷ್ಟಾಚಾರದಲ್ಲಿ ನಾವೇ ನಂಬರ್ ಒನ್

ಮಿಲ್ಕ್ ಬ್ರೆಡ್ಡಿನಲ್ಲಿ ಮಿಲ್ಕ್ ಅಂದರೆ ಹಾಲು ಇರಬೇಕಲ್ಲವೇ? ಅದರಲ್ಲಿ ಬ್ಲಡ್ ಏಕಿದೆ ಎಂಬ ಪ್ರಶ್ನೆಗೆ ಉತ್ತರ ಕೊಡುವ ಕುತೂಹಲಕಾರಿ ಕತೆಯೊಂದು ಇಲ್ಲಿದೆ.

ಒಬ್ಬ ಸಂತರು ಪಾದಯಾತ್ರೆ ಮಾಡುತ್ತಾ ಇದ್ದರು. ಆ ಊರಿಗೆ ಬರುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗಿತ್ತು. ಒಂದು ಗುಡಿಸಿಲಿನ ಮುಂದೆ ನಿಂತು ಏನಾದರೂ ತಿನ್ನಲು ಕೊಡುತ್ತೀರಾ? ಎಂದು ಕೇಳಿಕೊಂಡರು. ಗುಡಿಸಿಲಿನಾತ ನಾವು ಬಡವರು. ನಮ್ಮ ಬಳಿ ಒಣಗಿದ ಬ್ರೆಡ್ಡು ಬಿಟ್ಟರೆ ಮತ್ತೇನೂ ಇಲ್ಲ. ಆದರೆ ಅದನ್ನೂ ನಾವು ನಿಮಗೆ ಕೊಡುವಂತಿಲ್ಲ ಎನ್ನುತ್ತಾ ಮುಜುಗರ ಪಟ್ಟುಕೊಂಡರು. ಸಂತರು ನಿಮ್ಮಲ್ಲಿ ಒಣಗಿದ ಬ್ರೆಡ್ಡಿನ ತುಂಡುಗಳಿದ್ದರೆ, ಅದನ್ನೇಕೆ ಕೊಡುವಂತಿಲ್ಲ? ಎಂದರು.

ಗುಡಿಸಿಲಿನಾತ ಸ್ವಾಮಿ, ನಮ್ಮೂರಿಗೆ ಬರುವ ಯಾತ್ರಿಗಳೆಲ್ಲ ನಮ್ಮೂರಿನ ಪಾಳ್ಳೇಗಾರರ ಧರ್ಮಶಾಲೆಗೇ ಊಟಕ್ಕೆ ಹೋಗಬೇಕೆಂಬ ನಿಯಮವಿದೆ. ಅವರು ಬೇರೆಲ್ಲಿಯೂ ಊಟ ಮಾಡುವಂತಿಲ್ಲ. ಅವರಿಗೆ ಊಟ ಕೊಟ್ಟರೆ ಊರಿನವರಿಗೆ ಶಿಕ್ಷೆ ಕಾದಿಟ್ಟ ಬುತ್ತಿ ಎಂದರು.

ಸಂತರು ದೇಶದಲ್ಲೆಲ್ಲೂ ಇರದ ಇಂತಹ ನಿಯಮವನ್ನು ನಿಮ್ಮೂರಿನ ಪಾಳ್ಳೇಗಾರರು ಏಕೆ ಮಾಡಿದ್ದಾರೆ? ಎಂದು ಕೇಳಿದರು. ಗುಡಿಸಿಲಿನಾತ ಅತ್ತಿತ್ತ ನೋಡಿ ಪಿಸುಮಾತಿನಲ್ಲಿ ಸ್ವಾಮಿ ನಮ್ಮೂರಿನ ಪಾಳ್ಳೇಗಾರ ಬಹಳ ಕ್ರೂರಿ. ಜನರ ಮೇಲೆ ಇಲ್ಲಸಲ್ಲದ ಕರಗಳನ್ನೆಲ್ಲ ಹೇರಿದ್ದಾರೆ. ನಿಷ್ಕರುಣೆಯಿಂದ ವಸೂಲಿ ಮಾಡುತ್ತಾರೆ. ಬಡವರನ್ನಂತೂ ಬಹಳ ಪೀಡಿಸುತ್ತಾರೆ. ಅವರೆಲ್ಲರ ಶಾಪ ಆತನ ಮೇಲಿದೆ.

ಆದರೆ ಆತನಿಗೆ ಯಾರೋ ಅತಿಥಿ ಸತ್ಕಾರದಿಂದ ಪಾಪಗಳು ಪರಿಹಾರವಾಗುತ್ತದೆಂದು ಹೇಳಿದ್ದಾರಂತೆ. ಆದ್ದರಿಂದ ಅತಿಥಿಗಳನ್ನು ಒತ್ತಾಯದಿಂದ ತನ್ನ ಧರ್ಮಶಾಲೆಗೆ ಆತಿಥ್ಯ ಸ್ವೀಕರಿಸಲು ಕರೆದೊಯ್ಯುತ್ತಾನೆ. ನೀವು ಅಲ್ಲಿಗೆ ಹೋಗುವುದೇ ಒಳ್ಳೆಯದು ಎಂದರು.

ಸಂತರು ಕೊಂಚ ಯೋಚಿಸಿದರು. ಧರ್ಮಶಾಲೆಯ ಕಡೆ ನಡೆದರು. ಪಾಳ್ಳೇಗಾರರು ಅಲ್ಲಿಯೇ ನಿಂತಿದ್ದರು. ಸಂತರನ್ನು ದರ್ಪದಿಂದ ಭಕ್ಷ್ಯ-ಭೋಜ್ಯಗಳು ಸಿದ್ಧವಾಗಿದೆ. ನಿಮಗೆಷ್ಟು ಬೇಕೋ ಅಷ್ಟು ತಿನ್ನಿ. ಹೋಗುವಾಗ ನನಗೆ ಆಶೀರ್ವಾದ ಮಾಡಲು ಮರೆಯಬೇಡಿ. ಮರೆತರೆ ಕಾಲು ಮುರಿಯುತ್ತೇನೆ ಎಂದರು.

ಸಂತರು, ಭಕ್ಷ್ಯ-ಭೋಜ್ಯಗಳನ್ನೆಲ್ಲ ನೋಡಿದ ನಂತರ ಪಾಳ್ಳೇಗಾರರಿಗೆ ನನಗೆ ಭಕ್ಷ್ಯ-ಭೋಜ್ಯಗಳು ಬೇಡ. ಒಂದು ತುಂಡು ಬ್ರೆಡ್ಡು ಸಾಕು ಎಂದರು. ಪಾಳ್ಳೇಗಾರರು ಸಂತರನ್ನು ಉದಾಸೀನದಿಂದ ನೋಡಿ, ಒಂದು ತುಂಡು ಬ್ರೆಡ್ಡನ್ನು ಅವರತ್ತ ಎಸೆದರು. ಸಂತರು ಅದನ್ನು ಕೈಯ್ಯಲ್ಲಿ ಹಿಡಿದು ನನಗೇಕೋ ಇದನ್ನು ತಿನ್ನಲು ಮನಸ್ಸಾಗುತ್ತಿಲ್ಲ. ಇದರಲ್ಲಿ ತಿನ್ನಬಾರ ದಂತಹದ್ದೇನೋ ಇದೆ ಅನಿಸುತ್ತಿದೆ.

ನೀವು ನನಗೊಂದು ಉಪಕಾರ ಮಾಡಿ. ನಿಮ್ಮೂರಿನ ಹೊರಗಡೆ ಬಡವರ ಗುಡಿಸಲಿದೆ. ಅಲ್ಲಿಂದ ಒಂದು ತುಂಡು ಬ್ರೆಡ್ಡನ್ನು ತರಿಸಿ ಎಂದರು. ಪಾಳ್ಳೇಗಾರರು ಅಲ್ಲಿಂದ ಬ್ರೆಡ್ ತರಿಸಿ ಅದನ್ನು ಸಂತರಿಗೆ ಕೊಟ್ಟರು. ಸಂತರು ಪಾಳ್ಳೇಗಾರರ ಬ್ರೆಡ್ಡನ್ನು ಹಿಂಡಿದಾಗ ಅದರಿಂದ ರಕ್ತ ಹೊರಬಂತು.

ಆದರೆ ಗುಡಿಸಲಿನವರ ಬ್ರೆಡ್ಡನ್ನು ಹಿಂಡಿದಾಗ ಅದರಿಂದ ಹಾಲು ಹೊರಬಂದಿತು. ಅದನ್ನು ಪಾಳ್ಳೇಗಾರರಿಗೆ ತೋರಿಸಿದ ಸಂತರು ನೀವು ನೀಡುವ ಭೋಜನ ಬಡವರನ್ನು ಕಾಡಿಸಿ ಪೀಡಿಸಿ ಸಂಪಾದಿಸಿದ ಹಣದ್ದು. ಅದರಲ್ಲಿ ಬಡವರ ಗೋಳು ತುಂಬಿದೆ. ಅದನ್ನು ಹಿಂಡಿದರೆ ರಕ್ತ ಬರುತ್ತದೆ.

ಆದರೆ ದುಡಿದು ಗಳಿಸುವ ಗುಡಿಸಲಿನವರ ಬ್ರೆಡ್ಡನ್ನು ಹಿಂಡಿದರೆ ಹಾಲು ಬರುತ್ತದೆ ಎಂದರು. ಸಂತರ ಮಾತುಗಳಿಂದ ಪಾಳ್ಳೇಗಾರರು ಚಿಂತಾಕ್ರಾಂತರಾದರು. ಆನಂತರ ಸಂತರ ಕಾಲಿಗೆರಗಿ ತನ್ನ ಪದ್ಧತಿಗಳನ್ನು ಬದಲಾಯಿಸಿಕೊಳ್ಳುವುದಾಗಿ ಭರವಸೆಯಿತ್ತರು.

ಕತೆಯಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ, ಸರಳ ತತ್ತ್ವವೊಂದಿದೆ. ಪರರನ್ನು ಪೀಡಿಸಿ ಗಳಿಸಿದ ಹಣದಲ್ಲಿ ಅತಿಥಿ ಸತ್ಕಾರ ಮಾಡಿದರೆ, ನಮ್ಮ ಪಾಪ ಪರಿಹಾರವಾಗುವುದಿಲ್ಲ. ಒಳ್ಳೆಯ ಹೆಸರೂ ಬರುವುದಿಲ್ಲ, ಬಹುಶಃ ಪಾಪ ಇನ್ನೂ ಹೆಚ್ಚಾಗುತ್ತದೆಂಬ ತತ್ತ್ವವಿದೆಯಲ್ಲವೇ? ಈಗೊಂದು ಮಾತು! ನಾವೂ ಯಾರಿಗಾದರೂ ಮಿಲ್ಕ್ ಬ್ರೆಡ್ಡನ್ನು ದಾನವಾಗಿ ಕೊಟ್ಟರೆ, ನಾವು ದಾನ ಮಾಡುವ ಬ್ರೆಡ್ಡನ್ನು ಹಿಂಡಿದರೆ, ಅದರಿಂದ ಹೊರಹೊಮ್ಮುವುದು ಮಿಲ್ಕ್ ತಾನೇ? ಬ್ಲಡ್ ಅಲ್ಲ ತಾನೆ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button