ದೇವರಿಗೆ ಮಾತ್ರ ಹೆದರಿ, ಸುಳ್ಳು ಹೇಳದಿದ್ದರೇ ನೀವೂ ಸಂತರಾಗ್ತೀರಾ.! ಓದಿ
ದೇವರನ್ನು ಬಿಟ್ಟು ಮತ್ತಾರಿಗೂ ಹೆದರುವುದಿಲ್ಲ.!

ದಿನಕ್ಕೊಂದು ಕಥೆ
ದೇವರನ್ನು ಬಿಟ್ಟು ಮತ್ತಾರಿಗೂ ಹೆದರುವುದಿಲ್ಲ..
ಆ ಗಂಡಿಗೆ ಎಷ್ಟು ಗಟ್ಟಿಯಾದ ಗುಂಡಿಗೆ ಇದ್ದರೆ ಇಂಥ ಉತ್ತರ ಕೊಡಲು ಸಾಧ್ಯ? ಕೈಯಲ್ಲಿ ಕತ್ತಿ ಹಿಡಿದು ನಿಂತಿದ್ದ ದರೋಡೆಕೋರರಿಗೆ ಹೆದರದೆ ಉತ್ತರ ಕೊಟ್ಟ ಆ ಗಂಡಿಗೆ ಆಗಿನ್ನೂ ಹದಿನೆಂಟರ ವಯಸ್ಸು. ಹನ್ನೊಂದನೆಯ ಶತಮಾನದಲ್ಲಿ ಆಗಿಹೋದ ಅವರ ಹೆಸರು ಅಬ್ದುಲ್ ಖಾದರ್ ಜೀಲಾನಿ. ಅವರ ತಾಯಿ-ತಂದೆಯರಿಬ್ಬರೂ ಅನನ್ಯ ದೈವ ಭಕ್ತರು.
ಅವರು ಉನ್ನತ ವ್ಯಾಸಂಗಕ್ಕಾಗಿ ಬಾಗ್ದಾದ್ ನಗರಕ್ಕೆ ಹೊರಟು ನಿಂತಾಗ ಅವರ ತಾಯಿ ಖರ್ಚಿ ಗೆಂದು ನಲವತ್ತು ದಿನಾರುಗಳನ್ನು ಕೊಟ್ಟರು. ಹಣವನ್ನು ಮಗನ ಅಂಗಿಯ ಒಳಭಾಗದಲ್ಲಿಟ್ಟು ಹೊಲಿಗೆ ಹಾಕಿ ಕಳುಹಿಸಿಕೊಟ್ಟರು. ಹೊರಡುವ ಮುಂಚೆ ತಾಯಿ ‘ಮಗನೇ, ಎಷ್ಟೇ ಕಷ್ಟ ಬಂದರೂ ಸುಳ್ಳನ್ನು ಮಾತ್ರ ಹೇಳಬೇಡ. ಸುಳ್ಳು ಮಾನವನನ್ನು ನೀಚಮಟ್ಟಕ್ಕೆ ಇಳಿಸುತ್ತದೆ’ ಎಂದು ಬುದ್ಧಿವಾದ ಹೇಳಿ ಕಳುಹಿಸಿದರು.
ಜೀಲಾನಿಯವರು ಬಾಗ್ದಾದಿಗೆ ಹೋಗುತ್ತಿದ್ದ ಹಲವು ವ್ಯಾಪಾರಿಗಳೊಂದಿಗೆ ಪ್ರಯಾಣ ಹೊರಟರು. ದಾರಿಯಲ್ಲಿ ಒಂದು ರಾತ್ರಿ ಅವರ ಬಿಡಾರದ ಮೇಲೆ ಕಳ್ಳರು ದಾಳಿ ನಡೆಸಿ, ವ್ಯಾಪಾರಿಗಳನ್ನು ಲೂಟಿ ಮಾಡಿದರು.
ಜೀಲಾನಿ ಯವರನ್ನು ಚಿಕ್ಕವನೆಂದು ಪರಿಗಣಿಸಿದ ಕಳ್ಳರು ಅವರ ಗೊಡವೆಗೆ ಹೋಗಲಿಲ್ಲ. ಆದರೂ ಕಳ್ಳನೊಬ್ಬ ಜೀಲಾನಿಯವರನ್ನು ‘ಹೇಯ್ ಹುಡುಗ! ನಿನ್ನ ಬಳಿ ಏನಿದೆ?’ ಎಂದು ವಿನೋದಕ್ಕಾಗಿ ಕೇಳಿದ. ತಾಯಿಯ ಮಾತುಗಳನ್ನು ನೆನಪಿಸಿಕೊಂಡ ಜೀಲಾನಿಯವರು ‘ನನ್ನ ಒಳ ಅಂಗಿಯಲ್ಲಿ ನಲವತ್ತು ದಿನಾರುಗಳಿವೆ’ ಎಂದರು.
ಹುಡುಗ ಏನೇನೋ ಹೇಳುತ್ತಿದ್ದಾನೆಂದುಕೊಂಡ ಕಳ್ಳ ಹೊರಟುಹೋದ. ಆದರೆ ಆತ ತಮ್ಮ ಸರದಾರನ ಬಳಿ ಹೋಗಿ ಹುಡುಗನ ವಿಚಾರವನ್ನು ತಿಳಿಸಿದ. ಕಳ್ಳರ ಸರದಾರನಿಗೂ ಕುತೂಹಲವುಂಟಾಯಿತು. ಆತ ಹುಡುಗನನ್ನು ಕರೆಸಿ ‘ನಿನ್ನ ಹತ್ತಿರ ಏನಿದೆ? ನಿಜ ಹೇಳಿಬಿಡು’ ಎಂದು ಗದರಿಸಿದ.
ಜೀಲಾನಿಯವರು ‘ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಅಂಗಿಯ ಒಳ ಜೇಬಿನಲ್ಲಿ ನಲವತ್ತು ದಿನಾರುಗಳನ್ನು ಮುಚ್ಚಿಟ್ಟು ನನ್ನ ತಾಯಿ ಹೊಲೆದಿದ್ದಾರೆ’ ಎಂದು ಮುಗ್ಧವಾಗಿ ನುಡಿದರು. ಕಳ್ಳರ ಸರದಾರನಿಗೆ ಆಶ್ಚರ್ಯವೋ ಆಶ್ಚರ್ಯ!
ಆತ ‘ಹುಡುಗನೇ ನಾವು ಪಕ್ಕಾ ಕಳ್ಳರು. ನಿನ್ನನ್ನು ಲೂಟಿ ಮಾಡುತ್ತೇವೆಂದು ತಿಳಿದಿದ್ದೂ ನೀನು ಧೈರ್ಯವಾಗಿ ನಿಜವನ್ನೇ ಹೇಳುತ್ತಿದ್ದೀಯ. ನಿನಗೆ ನಮ್ಮನ್ನು ಕಂಡರೆ ಹೆದರಿಕೆಯಾಗುವುದಿಲ್ಲವೇ?’ ಎಂದು ಪ್ರಶ್ನಿಸಿದರು.
ಆಗ ಜೀಲಾನಿಯವರು ‘ಸರ್ವಶಕ್ತನಾದ ಅಲ್ಲಾಹುವನ್ನು ಬಿಟ್ಟು ಬೇರೆ ಯಾರಿಗೂ ಹೆದರಬಾರದೆಂದು ನನ್ನ ತಂದೆ ಹೇಳಿದ್ದಾರೆ. ಮತ್ತು ಎಷ್ಟೇ ಕಷ್ಟ ಬಂದರೂ ಸುಳ್ಳನ್ನು ಹೇಳಬಾರದು ಎಂದು ತಾಯಿಯೂ ಹೇಳಿದ್ದಾರೆ. ಅದಕ್ಕೇ ನಾನು ನಿಜವನ್ನೇ ಧೈರ್ಯವಾಗಿ ಹೇಳುತ್ತಿದ್ದೇನೆ’ ಎಂದರು.
ಹುಡುಗನ ಮುಗ್ಧ ಮಾತುಗಳೂ, ಆತನ ಧೈರ್ಯ ಸರದಾರನ ಮೇಲೆ ಅಪಾರ ಪ್ರಭಾವ ಬೀರಿದವು. ಆತ ಕಣ್ಣುಗಳಿಂದ ಗಳಗಳ ನೀರು ಸುರಿಸುತ್ತಾ ‘ಎಷ್ಟೋ ವರ್ಷಗಳಿಂದ ಕಳ್ಳತನ ಮಾಡಿಕೊಂಡೇ ಬಂದಿದ್ದೇನೆ. ಧನಿಕನಾಗಿದ್ದೇನೆ. ನನ್ನ ಬಳಿ ಬೇಕಾದಷ್ಟು ಸಿರಿಸಂಪತ್ತಿದೆ. ಆದರೆ ನಿನ್ನಲ್ಲಿರುವಷ್ಟು ಧೈರ್ಯ ನನಗಿಲ್ಲ. ಹಗಲಿರುಳೂ ಹೆದರಿಕೆಯಲ್ಲಿಯೇ ಬದುಕುವ ಜೀವನ ನನ್ನದು. ಛೇ, ನಾನು ಇಂದಿನಿಂದಲೇ ಬದಲಾಗುತ್ತೇನೆ. ಇನ್ನೆಂದಿಗೂ ಕಳ್ಳತನ ಮಾಡುವುದಿಲ್ಲ’ ಎಂದು ಹೇಳಿ ತನ್ನ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡನಂತೆ.
ಮುಂದೆ ಆ ಯುವಕ ಹಜರತ್ ಅಬ್ದುಲ್ ಖಾದರ್ ಜೀಲಾನಿ ಎಂಬ ಪ್ರಖ್ಯಾತ ಸೂಫಿ ಸಂತರಾದರಂತೆ. ಹೀಗೆ ಅವರು ಸಂತರಾಗು ವುದಕ್ಕೆ ಮುಂಚೆಯೇ ಪವಾಡವೊಂದನ್ನು ಮಾಡಿದ್ದರು.
ಸೂಫಿಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ ಎಂಬ ಅಮೂಲ್ಯವಾದ ಗ್ರಂಥದಲ್ಲಿ ಈ ಘಟನೆಯನ್ನು ಉಲ್ಲೇಖಿಸಿರುವ ಲೇಖಕ ಡಾ.ಅಬ್ದುಲ್ ಹಮೀದ್ ಮಹಾಶಯರಿಗೆ ಧನ್ಯವಾದಗಳನ್ನು ತಿಳಿಸಬಹುದು.
ಹಾಗೆಯೇ ನಾವು ಯಾರ್ಯಾರಿಗೆ ಹೆದರುತ್ತೇವೆಂಬ ಪಟ್ಟಿ ಮಾಡಬಹುದು. ನಮ್ಮ ಪಟ್ಟಿಯಲ್ಲಿ ದೇವರ ಹೆಸರು ಮಾತ್ರವಿದ್ದರೆ, ನಾವೂ ಸಂತರಾಗಬಹುದೆಂದು ಸಂತಸ ಪಡಬಹುದು !
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.