ದೋರನಹಳ್ಳಿ ದುರಂತಃ 23 ಗಾಯಾಳುಗಳಲ್ಲಿ 4 ಜನ ಸಾವು, ದೋರನಹಳ್ಳಿಯಲ್ಲಿ ಸ್ಮಶಾನ ಮೌನ
ದೋರನಹಳ್ಳಿ ದುರಂತಃ ಆಸ್ಪತ್ರೆಗೆ ಶಾಸಕ ದರ್ಶನಾಪುರ ಭೇಟಿ ಸಾಂತ್ವನ
23 ಗಾಯಾಳುಗಳಲ್ಲಿ 4 ಜನ ಸಾವು, ದೋರನಹಳ್ಳಿಯಲ್ಲಿ ಸ್ಮಶಾನ ಮೌನ
yadgiri, ಶಹಾಪುರಃ ಬೀಗರು ಬಿದ್ದರೂ, ನೆರೆಹೊರೆಯವರು ಸಂಭ್ರಮದ ಸೀಮಂತ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದರು. ಆಕಸ್ಮಿಕವಾಗಿ ಸಿಲಿಂಡರ್ ಅನೀಲ ಸೋರಿಕೆಯಿಂದ ಅನಾಹುತವೊಂದು ನಡೆದು ಶನಿವಾರ ಮತ್ತೊಂದು ಸಾವು ಸಂಭವಿಸುವ ಮೂಲಕ 23 ಗಾಯಾಳುಗಳಲ್ಲಿ 4 ಜನರು ಅಸುನೀಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇತ್ತ ಇಡಿ ಗ್ರಾಮ ಸ್ಮಶಾನ ಮೌನ ಆವರಿಸಿದೆ.
ಸಿಲಿಂಡರ್ ಸ್ಪೋಟದಿಂದ ಬೆಂಕಿಹೊತ್ತಿ ಉರಿದ ಪರಿಣಾಮ ಸಂಭ್ರಮಕ್ಕಾಗಿ ಹಾಕಲಾದ ಟೆಂಟ್ ಸಮೇತ ಕುರ್ಚಿಗಳು ಸುಟ್ಟು ಕರಕಲಾಗಿವೆ. ಜೊತೆಗೆ ಸುಮಾರು ಜನರಿಗೆ ಸಣ್ಣ ಪುಟು ಗಾಯಗಳಾದರೆ 23 ಜನರು ತೀವ್ರಗಾಯಗೊಂಡಿದ್ದಾರೆ. 10 ಜನರ ಸ್ಥಿತಿ ಚಿಂತಾಜನಕವಿದೆ ಎಂದು ಹೇಳಲಾಗಿತ್ತು. ಈಗಾಗಲೇ ಅದರಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಇನ್ನೂ ಹಲವರ ಸ್ಥಿತಿ ಗಂಭೀರವಿದೆ. ದೋರನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷದಿಂದ ಒಂದಿಲ್ಲೊಂದು ದುರಂತ, ದುರ್ಘಟನೆಗಳು ನಡೆಯುತ್ತಿವೆ. ಕಳೆದ ವರ್ಷ ಸಾಲಬಾಧೆಯಿಂದ ರೈತ ಕುಟುಂಬವೊಂದು ದಂಪತಿ ಸಮೇತ ಮಕ್ಕಳೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿತ್ತು. ಅದಕ್ಕಿಂತ ಮೊದಲೊಮ್ಮೆ ಗ್ರಾಮದ ಆರಾಧ್ಯ ದೇವರ ರಥೋತ್ಸವ ವೇಳೆ ಚಕ್ರಕ್ಕೆ ಸಿಲುಕಿ ಭಕ್ತನೋರ್ವ ಸಾವನ್ನಪ್ಪಿದ್ದ ಅಲ್ಲದೆ ಇದೇ ಜಾತ್ರೆ ಸಂದರ್ಭದಲ್ಲಿ ಬ್ಯಾನರ್ ಸಂಬಂಧ ಎರಡು ಸಮುದಾಯಗಳ ಮಧ್ಯೆ ದೊಡ್ಡ ಗಲಾಟೆಯೇ ನಡೆದಿತ್ತು. ಮೇಲಿಂದ ಮೇಲೆ ದುರ್ಘಟನೆಗಳು ನಡೆಯುತ್ತಿವೆ ಮುಂದೇನು ಕಾದಿದೆಯೋ ಎಂದು ಗ್ರಾಮದ ಹಿರಿಯರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸಿಲಿಂಡರ್ ಸ್ಪೋಟ ದುರಂತದಿಂದಾಗಿ ಸದ್ಯ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸಂಭ್ರಮ ಸಡಗರ ಇರಬೇಕಿದ್ದ ಮನೆಯಲ್ಲಿ ನೀರವ ಮೌನ ತುಂಬಿದೆ.
ಶುಕ್ರವಾರ ಸೂಕ್ತ ಚಿಕಿತ್ಸೆ ಫಲಕಾರಿಯಾಗದ ಕಾರಣ ಆದ್ಯ(3), ಮಹಾಂತೇಶ (15 ತಿಂಗಳು), ನಿಂಗಮ್ಮ (80) ಮೃತ ಪಟ್ಟಿದ್ದರು. ಶನಿವಾರ ಮತ್ತೋರ್ವ ಗಾಯಾಳು ಗಂಗಮ್ಮ (45) ಮೃತಪಟ್ಟಿದ್ದಾರೆ. ಒಟ್ಟು 23 ಜನರು ಗಾಯಗೊಂಡಿದ್ದು, 4 ಜನರು ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಯಲ್ಲಿ ಉಳಿದಿದ್ದಾರೆ. 4 ಜನರು ದುರ್ಮರಣ ಹೊಂದಿದ್ದು, 15 ಜನರು ಕಲ್ಬುರ್ಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇನ್ನೂ 5 ಜನರ ಸ್ಥಿತಿ ಗಂಭೀರವಿದೆ.
ಆಸ್ಪತ್ರೆಗೆ ಶಾಸಕ ದರ್ಶನಾಪುರ ಭೇಟಿ ಸಾಂತ್ವನ ಧನ ಸಹಾಯ
ದೋರನಹಳ್ಳಿ ಘಟನೆಯಲ್ಲಿ ಗಾಯಗೊಂಡು ಬಸವೇಶ್ವರ ಆಸ್ಪತ್ರೆಗೆ ದಾಖಲಾದ ಸಾವು ನೋವಿನ ಮಧ್ಯ ಹೋರಾಟ ನಡೆಸುತ್ತಿರುವ ಗಾಯಾಳುಗಳನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಸಚಿವ ಮಾಲಕರಡ್ಡಿ, ಶಾಸಕ ವೆಂಕಟರಡ್ಡಿ ಮುದ್ನಾಳ ಸೇರಿದಂತೆ ಯಾದಗಿರಿ ಡಿಎಚ್‍ಓ, ಡಾ.ಕಾಮರಡ್ಡಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಶಾಸಕ ದರ್ಶನಾಪುರ ಗಾಯಾಳುಗಳನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಅಲ್ಲದೆ ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ನೊಂದ ರೋಗಿಗಳ ಸಹಾಯ ಧನ ಸಹ ನೀಡಿದರು.