ಮಳೆ ಅವಾಂತರ ರೈತ ಆತಂಕ – ಸರ್ಕಾರದಿಂದ ನೆರವು ಶಿರವಾಳ ಭರವಸೆ
ಹತ್ತಿಯಲ್ಲಿ ಮರು ಮೊಳಕೆ, ತೊಗರೆ ಫಲ, ಭತ್ತ ನೆಲಕ್ಕೆ
ಮತ್ತೆ ಸಂಕಷ್ಟದಲ್ಲಿ ರೈತ ಸೂಕ್ತ ಪರಿಹಾರ ಸಿಎಂಗೆ ಮಾಹಿತಿ – ಗುರು ಪಾಟೀಲ್
ಮಲ್ಲಿಕಾರ್ಜುನ ಮುದ್ನೂರ.
yadgiri, ಶಹಾಪುರಃ ಕ್ಷೇತ್ರದಾದ್ಯಂತ ಕಳೆದ ವಾರದಿಂದ ಮಳೆ ಹಾಗೂ ಜಿಟಿ ಜಿಟಿ ಮಳೆ ನಿರಂತರ ಸುರಿದ ಪರಿಣಾಮ ಹತ್ತಿ ಬೆಳೆ ಮರು ಮೊಳಕೆ ಹೊಡೆದು ಕಪ್ಪಾಗಿ ಹಾಳಾಗುತ್ತಿದೆ. ಮತ್ತು ತೊಗರೆ ಬೆಳೆಯ ಫಲ ಉದುರಿ ಹೋಗಿದೆ. ಭತ್ತದ ಬೆಳೆ ಮಳೆ ರಭಸಕ್ಕೆ ನೆಲಕ್ಕುರಳಿದೆ. ಹೀಗಾಗಿ ರೈತರು ಮತ್ತೆ ಕಂಗಾಲಾಗಿದ್ದಾರೆ. ಮೊದಲೇ ಕೋವಿಡ್-19 ಆವರಿಸಿ ಎಲ್ಲಡೆ ಆತಂಕ ಮನೆ ಮಾಡಿತ್ತು. ಈಗ ಅಕಾಲಿಕ ಮಳೆ ಬೆಳೆಗಳನ್ನು ನಾಶಗೊಳಿಸುವ ಮೂಲಕ ರೈತರನ್ನು ಅಕ್ಷರಶಃ ನುಗ್ಗು ಮಾಡಿದೆ.
ತಾಲೂಕಿನಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವ ಪರಿಣಾಮ ಹತ್ತಿ ಫಲದಲ್ಲಿ ಮರು ಮೊಳಕೆ ಹೊಡೆದು ಹಾಳಾಗಿದೆ. ತೊಗರೆ ಬೆಳೆ ಫಲ ಉದುರಿ ಹೋಗಿದೆ. ಭತ್ತ ನೆಲಕಚ್ಚಿದೆ ಘಟನೆಗಳು ನಡೆದಿವೆ. ತಾಲೂಕಿನ ಶಿರವಾಳ, ಭೀಮರಾಯನ ಗುಡಿ, ಹಯ್ಯಾಳ(ಬಿ) ಸೇರಿದಂತೆ ದೋರನಹಳ್ಳಿ ಭಾಗದಲ್ಲಿ ನಿರಂತರ ಜಡಿ ಮಳೆಯಿಂದಾಗಿ ಬೆಳೆಗಳು ನಾಶವಾಗಿದೆ. ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿ ಆಯಾ ಬೆಳೆಗೆ ಅನುಗುಣವಾಗಿ ರೈತರ ನೆರವಿಗೆ ಬರಬೇಕಿದೆ. ಸರ್ಕಾರವೂ ಕುಲಕುಂಷವಾಗಿ ಪರಿಶೀಲಿಸಿ ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕಿದೆ.
ತಾಲೂಕಿನಲ್ಲಿ ಭತ್ತ 14242 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ತೊಗರಿ 14620 ಹೆಕ್ಟೇರ್ ಪ್ರದೇಶ ಮತ್ತು ಹತ್ತಿ 19765 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸದ್ಯ ಉತ್ತಮ ಫಸಲು ಬಂದಿದೆ ಇನ್ನೇನು ರೈತರಿಗೆ ಅನುಕೂಲವಾಗಲಿದೆ ಎಂದು ಲೆಕ್ಕಾಚಾರದಲ್ಲಿರುವಾಗಲೇ ವಾಯುಭಾರ ಕುಸಿತದಿಂದ ಉಂಟಾದ ಮಳೆ ಅವಾಂತರ ಸೃಷ್ಟಿಸಿದೆ. ಇದು ರೈತರ ಪಾಲಿಗೆ ದೊಡ್ಡ ಕಂಕಟವಾಗಿಯೇ ಪರಿಣಮಿಸಿದೆ.
ಅಕಾಲಿಕ ಮಳೆ, ಜಿಟಿ ಜಿಟಿ ಮಳೆಯಿಂದಾಗಿ ಹತ್ತಿ ಫಲದಲ್ಲಿ ಮರು ಮೊಳಕೆ ಹೊಡೆದು ಹಾಳಾಗಿದೆ. ಅಲ್ಲದೆ ತೊಗರಿ ಫಲ ಉದುರಿ ಹೋಗಿದೆ. ಭತ್ತ ಸಂಪೂರ್ಣ ನೆಲಕಚ್ಚಿದೆ. ಹೀಗಾಗಿ ರೈತರಲ್ಲಿ ಆತಂಕದ ಛಾಯೆ ಎದುರಾಗಿದೆ. ಮತ್ತೆ ರೈತ ಸಂಕಷ್ಟದ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವದು. ಈ ಭಾಗದ ಬೆಳೆ ಹಾನಿ ರೈತರ ಸ್ಥಿತಿಗತಿ ಕುರಿತು ಸಿಎಂಗೆ ಮಾಹಿತಿ ನೀಡಲಾಗುವದು. ಸರ್ಕಾರ ನೆರವಿಗೆ ಧಾವಿಸಲಿದೆ. ಆತಂಕ ಬೇಡ. ಬೆಳೆ ನಾಶ ಕುರಿತು ಸಮರ್ಪಕ ಪರಿಶೀಲನೆ ನಡೆಸುವ ಮೂಲಕ. ಸೂಕ್ತ ಪರಿಹಾರ ಒದಗಿಸಲಿದೆ.
–ಗುರು ಪಾಟೀಲ್ ಶಿರವಾಳ. ಮಾಜಿ ಶಾಸಕ.
ತಾಲೂಕಿನಾದ್ಯಂತ ಮಳೆ, ಜಿಟಿ ಜಿಟಿ ಮಳೆ ಮುಂದುವರೆದಿದು, ಹತ್ತಿ, ತೊಗರಿ, ಭತ್ತ, ಸೇಂಗಾ ಸೇರಿದಂತೆ ಸಾಕಷ್ಟು ಬೆಳೆಗಳು ನಾಶವಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಬೆಳೆ ನಾಶ ಕುರಿತು ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸಲಾಗುವದು.
–ಸುನೀಲಕುಮಾರ. ಸಹಾಯಕ ಕೃಷಿ ನಿರ್ದೇಶಕರು ಶಹಾಪುರ.