ಗೋವಾಃ ಕನ್ನಡ ಭವನ ನಿರ್ಮಾಣಕ್ಕೆ ಸಿಎಂರಿಂದ 10 ಕೋಟಿ ಮಂಜೂರು – ಮೇಟಿ
ಕರ್ನಾಟಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗೋವಾಃ ಕನ್ನಡ ಭವನ ನಿರ್ಮಾಣಕ್ಕೆ ಸಿಎಂರಿಂದ 10 ಕೋಟಿ ಮಂಜೂರು – ಮೇಟಿ
ಪಣಜಿಃ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ 10 ಕೋಟಿ ಮಂಜೂರು ಮಾಡಿದ್ದಾರೆ ಎಂದು ಗೋವಾ ಕಸಾಪ ಅಧ್ಯಕ್ಷ ಸಿದ್ದಣ್ಣ ಮೇಟಿ ತಿಳಿಸಿದರು.
ಅಖಿಲ ಗೋವಾ ಕನ್ನಡ ಸಂಘ, ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಇಲ್ಲಿನ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ನಡೆದ ‘ಗೋವಾ ಕಲಾ ಉತ್ಸವ’ ಅಭಿನಂದನಾ ಸಮಾರಂಭ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಣ, ಸಂಪತ್ತು ಯಾರಾದರೂ ಗಳಿಸಬಹುದು ಆದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿ ಗಳಿಸುವದು ಸುಲಭವಲ್ಲ. ಅದಕ್ಕೆ ತಕ್ಕ ಶ್ರಮವಿದೆ. ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ. ಇಂತಹ ಸಾಧಕರನ್ನು ಗುರುತಿಸಿ ಅಭಿನಂದನೆ ಸಲ್ಲಿಸುವದು, ಪ್ರೋತ್ಸಾಹಿಸುವದು ನಮ್ಮ ಕರ್ತವ್ಯ.
ನಾವೆಲ್ಲ ಒಗ್ಗಟ್ಟಾಗಿ ಜಾಯಿ, ಧರ್ಮ ಯಾವುದೆ ಬೇಧಭಾವವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದೇವೆ. ಅಲ್ಲದೆ ಮುಖ್ಯವಾಗಿ ವಾಸ್ಕೋದ ವರುಣಾಪುರಿಯಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವ ಕನಸಿದೆ ಅದನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮವನ್ನು ಮಿಸ್ ಇಂಡಿಯಾ ವಿಜೇತೆ ಡಾ.ಪೂಜಾ ರಮೇಶ ಉದ್ಘಾಟಿಸಿದರು. ಸಾಹಿತಿಗಳಾದ ಅರವಿಂದ ಯಾಳಗಿ, ಅಗೋಕಮ ಸಂಘ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಗೋವಾ ಕೇಸರಿ ಸಂಪಾದಕ ಶ್ರೀನಿವಾಸ ಪೈ, ಗೋವಾಕನ್ನಡ ದಿನಪತ್ರಿಕೆ ವರದಿಗಾರ ಪ್ರಕಾಶ ಭಟ್, ಹಿರಿಯ ಪತ್ರಕರ್ತ ಮಾರುತಿ ಬಡಿಗೇರ ಇತರರಿದ್ದರು. ಕನ್ನಡ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.