ಆಲಿಕಲ್ಲು ಮಳೆ ಅಪಾರ ನಷ್ಟ ಪರಿಹಾರಕ್ಕೆ ಶಿರವಾಳ ಆಗ್ರಹ
yadgiri, ಶಹಾಪುರಃ ಮೊನ್ನೆ ಅಕಾಲಿಕವಾಗ ಆಲಿಕಲ್ಲು ಮಳೆ ಆರ್ಭಟದಿಂದಾಗಿ ತಾಲೂಕಿನ ಹಳಿಸಗರ, ಕನ್ಯಾಕೋಳೂರ, ಬೆನಕನಹಳ್ಳಿ ಸೇರಿದಂತೆ ವಿವಿಧಡೆ ಅಪಾರ ಬೆಳೆಗಳು ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಜಿಲ್ಲಾಡಳಿತ ಶೀಘ್ರದಲ್ಲಿ ಸೂಕ್ತ ಪರಿಹಾರ ಒದಗಿಸಬೇಕೆಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮನವಿ ಮಾಡಿದ್ದಾರೆ.
ಹಳಿಸಗರ ಭಾಗದ ಸಂಗಮೇಶ್ವರ ನರ್ಸರಿ ಹಾಗೂ ಬೆನಕನಹಳ್ಳಿ ಭಾಗದಲ್ಲಿ ಆಲಿಕಲ್ಲು ಮಳೆಯಿಂದ ಹೊಡೆತ ತಿಂದು ನಷ್ಟ ಹೊಂದಿದ್ದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಆಲಿಕಲ್ಲು ಆರ್ಭಟದಿಂದ ಜೋರಾಗಿ ಮಳೆ ಬಂದ ಪರಿಣಾಮ ಮೆಣಸಿನಕಾಯಿ, ಸಜ್ಜೆ, ಭತ್ತ ಸೇರಿದಂತೆ ತರಕಾರಿ ಮತ್ತು ನರ್ಸರಿ ಬೆಳೆಗಳು ಹಾಳಾಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಹೀಗಾಗಿ ಚುನಾವಣೆ ಘೋಷಣೆ ಮುಂಚೆಯೇ ನಷ್ಟ ಹೊಂದಿದ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಸಮರ್ಪಕ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹಾನಿಗೆ ತಕ್ಕಂತೆ ರೈತರಿಗೆ ಜಿಲ್ಲಾಡಳಿತ ಕೂಡಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದರು. ಈ ಕುರಿತು ಕೃಷಿ ಸಚಿವರೊಂದಿಗೆ ಮಾತನಾಡಿದ್ದು, ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಏ.10 ರವರೆಗೆ ನೀರು ಹರಿಸಿಃ ಗುರು ಪಾಟೀಲ್
ಕೃಷ್ಣಾ ಕಾಡಾ ವ್ಯಾಪ್ತಿ ಕಾಲುವೆಗೆ ಏಪ್ರೀಲ್ 10 ರವರೆಗೆ ನೀರು ಹರಿಸಬೇಕು. ಇದರಿಂದ ರೈತರು ಬೆಳೆದ ವಿವಿಧ ಬೆಳೆಗಳಿಗೆ ಅನುಕೂಲವಾಗಲಿದೆ ಇಲ್ಲವಾದಲ್ಲಿ ಮತ್ತೊಂದು ಹೊಡೆತ ರೈತರ ಮೇಲೆ ಬೀಳಲಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಕೃಷ್ಣಾ ಕಾಡಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಪ್ರಸಕ್ತ ಸಮಯದಲ್ಲಿ ಏ.10 ರವರೆಗೆ ನೀರು ಹರಿಸದಿದ್ದಲ್ಲಿ ಅಪಾರ ಪ್ರಮಾಣದ ಬೆಳೆ ನೀರಿಲ್ಲದೆ ಒಣಗಿ ಹೋಗಲಿದೆ. ಹೀಗಾಗಿ ಅಧಿಕಾರಿಗಳು ವೈಜ್ಞಾನಿಕವಾಗಿ ಚಿಂತಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.