ಹೈಕೋರ್ಟ್ ಮಧ್ಯಂತರ ಆದೇಶ ಪಾಲನೆ, ಪಾಲಕರ ಸಹಕಾರ ಅಗತ್ಯ- ಕೂಡ್ಲಿಗಿ
ಸಮಾಜದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆಗೆ ಸಹಕರಿಸಿ
yadgiri, ಶಹಾಪುರಃ ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷದ ನಡುವೆ ಹೈಕೋರ್ಟ್‍ನಿಂದ ಶಾಲೆಗಳನ್ನು ಆರಂಭಿಸಲು ಮಧ್ಯಂತರ ಆದೇಶ ಬಂದ ಹಿನ್ನೆಲೆ ಸೋಮವಾರದಿಂದ ಪ್ರೌಢ ಶಾಲೆಗಳು 8, 9, 10 ನೇ ತರಗತಿ ಶಾಲೆಗಳು ಶುರುವಾಗಲಿದೆ. ಈಗಾಗಲೇ ಪ್ರಾಥಮಿಕ ಶಾಲೆಗಳು ನಡೆಯುತ್ತಿದ್ದು, ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ತಹಶೀಲ್ದಾರ ಮಧುರಾಜ್ ಕೂಡ್ಲಿಗಿ ತಿಳಿಸಿದರು.
ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಹೈಕೋಟ್ ಮಧ್ಯಂತರ ಆದೇಶ ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಗಾಗಿ ನಗರ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೊನಾದಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಂಡಿದೆ. ಇಂತಹ ಸ್ಥಿತಿಯಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಉಂಟಾಗಿ ಮಕ್ಕಳ ಭವಿಷ್ಯ ಹಾಳುಗೆಡವಲು ಬಿಡಬಾರದು. ಈ ವಿವಾದ ದೇಶಕ್ಕೆ ಮಾರಕವಾಗಿದೆ. ದಯವಿಟ್ಟು ಪಾಲಕರು ಇದನ್ನರಿತು ನಡೆದುಕೊಳ್ಳಬೇಕು. ಮಕ್ಕಳ ಮುಂದಿನ ಭವಿಷ್ಯಕ್ಕೆ ಪೆಟ್ಟು ಬೀಳದಂತೆ ನಾಗರಿಕರ ಸಹಕಾರವು ಅಗತ್ಯವಿದೆ ಎಂದರು.
ಅಲ್ಲದೆ ವಿವಿಧ ಸಂಘಟನೆಗಳು ಪರ, ವಿರೋಧ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಪ್ರತಿಭಟನೆ ಮಾಡುವಂತಿಲ್ಲ. ಕಾನೂನು ಚೌಕಟ್ಟಿನಲ್ಲಿ ತಹಸೀಲ್ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ, ಹೈಕೋರ್ಟ್ ಆದೇಶದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಪಿಐ ಶ್ರೀನಿವಾಸ ಅಲ್ಲಾಪುರೆ ಮಾತನಾಡಿ, ಸಗರನಾಡು ಸಾಧು-ಸೂಫಿ ಸಂತರ ಪುಣ್ಯಭೂಮಿ, ಕೋಮು ಸೌಹಾರ್ಧತೆಗೆ ಹೆಸರಾದ ಈ ನಾಡಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಕುರಿತು ಪರ ವಿರೋಧ ಹೋರಾಟ ಪ್ರತಿಭಟನೆಗಳು ಕೈಗೊಳ್ಳದೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಬೇಕು. ಮಧ್ಯಂತರ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಧಕ್ಕೆ ತರುವಂತ ಪೋಸ್ಟ್‍ಗಳನ್ನು ಹಾಕಬೇಡಿ. ಸುಳ್ಳು ಸುದ್ದಿ ಧರ್ಮಾಂಧ ಸಂದೇಶಗಳನ್ನು ಹರಡದಿರಿ. ಅಂಥವರ ಮೇಲೆ ಸೂಕ್ತ ನಿಗಾವಹಿಸಲಾಗಿದೆ. ಕಾನೂನು ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮಕೈಗೊಳ್ಳುವದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಯೊಬ್ಬರು ಈ ದೇಶದ ಕಾನೂನು ಗೌರವಿಸಬೇಕು ಎಂದರು.
ಪಿಎಸ್‍ಐ ಶಾಮಸುಂದರ್ ನಾಯಕ್, ಶಿವಪುತ್ರ ಜವಳಿ, ರಾಯಪ್ಪ ಸಾಲಿಮನಿ, ಮರೆಪ್ಪ ಜಾಲಿಬೆಂಚಿ, ಶಿವಕುಮಾರ ದೊಡ್ಡಮನಿ, ವಿನೋದ ರಾಠೋಡ್, ಎಸ್.ಎಂ.ಸಾಗರ, ಸಂಗಣ್ಣ ಮುಡಬೂಳ, ಮಲ್ಲಯ್ಯ ಸ್ವಾಮಿ, ಭೀಮಣ್ಣ ಶಖಾಪುರ, ಮೌನೇಶ ಸುರಪುರ, ವೆಂಕಟೇಶ ಬೋನೇರ, ಸುಭಾಷ್ ಹೋತಪೇಠ, ಭೀಮಾಶಂಕರ್ ಕಟ್ಟಿಮನಿ, ಶ್ರೀರಾಮ ಸೇನೆಯ ಶಿವಕುಮಾರ ಇತರರಿದ್ದರು.