ಕಾವ್ಯ
“ಹೆಣ್ಣಿನ ಬೆಲೆ” ಕವಿ ಶ್ವೇತಾ ಬಂಡೇಗೋಳಮಠ ಕಾವ್ಯ ಬರಹ
//ಹೆಣ್ಣಿನ ಬೆಲೆ//
ಹೆಣ್ಣು ಹಡೆದರೆ ಸೂತಕ ಎನಬೇಡ/
ಹೆಣ್ಣು ಮನೆಯ ಕನ್ನಡಿಯು//ಮಗನೆ//
ಹೆಣ್ಣಿನ ಬಳಗ ಬಲು ಚಂದ//೧//
ಹೆಣ್ಣೊಂದು ಕಲಿತರೆ ಶಾಲೆಯು ತೆರೆದಂತೆ
ಹೆಣ್ಣು ಬಾಳಿನ ಕಣ್ಣು//ನನ ಮಗುವೆ/
ಅರಿತು ನಡೆಸು ನೀ ಜೀವನವ//೨//
ಹೆಣ್ಣಾಗಲಿ ಗಂಡಾಗಲಿ ಭೇದ ನೀ ಬಗಿಬೇಡ
ಈ ಸಮಾಜದ ಎರಡು ಕಣ್ಣು//ಎಂದು ತಿಳಿ//
ಹೆಣ್ಣು ಅಬಲೆಯಲ್ಲ ಸಬಲೆಯು//೩//
ಹೆಣ್ಣಿಗೆ ತವರಾಸೆ, ಭೂಮಿಗೆ ಮಳೆಯಾಸೆ
ಹೂ ಪುಷ್ಪ ಗಳಿಗೆ ಜೇನಾಸೆ//ನನ ಮಗುವೆ//
ಈ ನಿನ್ನ ನಗುವೇ ನನ್ನಾಸೆ//೪//
ಹೆಣ್ಣಿನ ಅಪಮಾನ ಬಲು ಅಪರಾಧ
ಹೆಣ್ಣಿನ ಬೆಲೆಯು ನೀ ತಿಳಿಯೊ//ಮಗನೆ//
ಸತ್ತಾಗ ಹೆಣ್ಣು ಮಗಳೇ ಅಳುವದು//೫//