YADGIRI-ಸರ್ಕಾರಿ ಮಾದರಿ ಡಿಗ್ರಿ ಕಾಲೇಜು ಕಟ್ಟಡ ಕಾಮಗಾರಿ ಕಳಪೆ ಆರೋಪ
ಹಳ್ಳದ ಮಣ್ಣು ಮಿಶ್ರಿತ ಮರಳು ಬಳಕೆ, ಕಟ್ಟಡ ಅಭದ್ರತೆ – ಪರಿಶೀಲನೆಗೆ ಆಗ್ರಹ
yadgiri, ಶಹಾಪುರಃ ನಗರದ ಆದರ್ಶ ವಿದ್ಯಾಲಯ ಬಳಿ ಸರ್ಕಾರಿ ಡಿಗ್ರಿ ಕಾಲೇಜು ವ್ಯಾಪ್ತಿಯ ಪ್ರದೇಶದಲ್ಲಿ ನೂತನ ಮಾದರಿ (ಮಾಡರ್ನ್) ಡಿಗ್ರಿ ಕಾಲೇಜು ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ದಲಿತ ಮುಖಂಡ ಹೊನ್ನಪ್ಪ ಗಂಗನಾಳ ಆರೋಪಿಸಿದ್ದಾರೆ.

ದೊಡ್ಡ ಮಟ್ಟದ ಕಾಮಗಾರಿ ಇದಾಗಿದ್ದು, ಮಣ್ಣು ಹುಂಡೆಗಳ ಸಮ್ಮಿಶ್ರಣದ ಹಳ್ಳದ ಮರಳದೀ ಕಾಮಗಾರಿಗೆ ಬಳಕೆಯಾಗುತ್ತಿದೆ. ಇದರಿಂದ ಕಟ್ಟಡ ಅಭದ್ರತೆ ಹೊಂದಲಿದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಅಲ್ಲದೆ ಸುಣ್ಣದ ಆಲೋಬ್ಲಾಕ್ ಬಳಕೆ ಮಾಡಲಗುತ್ತಿದ್ದು, ಇದು ಕೂಡ ಕಳಪೆಮಟ್ಟದ್ದಾಗಿದೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಪರಿಶೀಳನೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಮಾನವ ಸಂಪನ್ಮೂಲ ಇಲಾಖೆ ರುಸಾ ಯೋಜನೆಯಡಿಯಲ್ಲಿ 12 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದ್ದು, ಕರ್ನಾಟಕ ಗೃಹ ಮಂಡಳಿಯವರು ಅನುಷ್ಠಾನಗೊಳಿಸಿದ್ದಾರೆ. ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ.
ಹಿಂದುಳಿದ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆ ಜಾರಿಗೊಳಿಸಿದೆ. ಇದು ರಾಜ್ಯದಲ್ಲಿಯೇ ಎರಡನೇಯ ಕಾಮಗಾರಿಯಾಗಿದ್ದು, ಈ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಸತಿ ಸಹಿತ ಸಕಲ ವ್ಯವಸ್ಥೆಯೊಂದಿಗೆ ಮಾದರಿ ಕಾಲೇಜು ಕಟ್ಟಡ ನಿರ್ಮಾಣ ಇದಾಗಿದೆ.
ಮಕ್ಕಳ ಸಮಗ್ರ ಶಿಕ್ಷಣ ಅಭಿವೃದ್ದಿಗೆ ಕೇಂದ್ರ ಸರ್ಕಾರ ವಿನೂತನ ಯೋಜನೆ ಜಾರಿ ಮಾಡಿದೆ. ಕೋಟ್ಯಂತರ ರೂ.ಮೀಸಲಿಟ್ಟಿದೆ. ರಾಷ್ಟ್ರೀಯೇತರ ಉಚ್ಛ ಶಿಕ್ಷಣ ಅಭಿಯಾನ ಇದಾಗಿದ್ದು, ವಸತಿ ಸಹಿತ ಇತರೆ ಸೌಲಭ್ಯಗಳೊಂದಿಗೆ ಕಟ್ಟಡ ನಿರ್ಮಾಣವಾಗುತ್ತಿದೆ. ಗುಣ ಮಟ್ಟದ ಕಾಮಗಾಗಿ ನಡೆದಲ್ಲಿ ಈ ಭಾಗದ ಮಕ್ಕಳ ಶಿಕ್ಷಣ ಭವಿಷ್ಯ ಉಜ್ವಲವಾಗಲಿದೆ.
ಆದರೆ ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದವರು, ಮನಬಂದಂತೆ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅಂದಾಜು ಪತ್ರಿಕೆಯಂತೆ ಕಾಮಗಾರಿ ನಡೆಯುತ್ತಿಲ್ಲ. ಹೀಗಾಗಿ ಕಡಿಮೆ ಅವಧಿಯಲ್ಲಿಯೇ ಕಟ್ಟಡ ತನ್ನ ಜೀವ ಕಳೆದುಕೊಳ್ಳಲಿದೆ. ಇದರಿಂದ ಮುಂದೆ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಈ ಕುರಿತು ಜನಪ್ರತಿನಿಧಿಗಳು ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಯುಜಿಸಿ ಸೆಕ್ಷನ್ 12 (ಬಿ) ಮತ್ತು (ಸಿ) ಅಡಿಯಲ್ಲಿ ಶಾಲಾ ಕಾಲೇಜುಗಳನ್ನು ಗುರುತಿಸಿ ನೋಂದಣಿ ಮಾಡಿಸಿಕೊಳ್ಳಲಾಗುತ್ತದೆ. ಹೀಗೆ ನೋಂದಣಿ ಕಾಲೇಜುಗಳಲ್ಲಿ ಮಾದರಿ ಶಿಕ್ಷಣ ಅನುಷ್ಠಾನಕ್ಕಾಗಿ ಸರ್ಕಾರ ಕಟ್ಟಡ ಕಾಮಗಾರಿಗಳಿಗೆ ಕೋಟ್ಯಂತರ ರೂ.ಅನುದಾನ ವಾರ್ಷಿಕವಾಗಿ ಮೀಸಲಾಗಿರಿಸುತ್ತದೆ. ಕೋಟ್ಯಂತರ ರೂ.ಗಳ ಕಟ್ಟಡ ಕಾಮಗಾರಿಯನ್ನು ಗುತ್ತಿಗೆದಾರ ಹಾಗೂ ಏಜನ್ಸಿಗಳ ಒಳ ಒಪ್ಪಂದದಿಂದ ಕಾಮಗಾರಿಗಳು ಹಳ್ಳ ಹಿಡಿಯುತ್ತಿವೆ. ಕರ್ನಾಟಕ ಗೃಹ ಮಂಡಳಿ ಅಧೀನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ. ಅಂದಾಜು ಪತ್ರೆಯಂತೆ ಕಾಮಗಾರಿ ನಡೆಯುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ತನಿಖೆ ನಡೆಸುವ ಮೂಲಕ ಕಳಪೆ ಮಟ್ಟ ಕಾಮಗಾರಿ ಗುರುತಿಸಿ ಸೂಕ್ತ ಕ್ರಮಕೈಗೊಳ್ಳಲಿ.
-ಹೊನ್ನಪ್ಪ ಗಂಗನಾಳ. ದಲಿತ ಮುಖಂಡ.