ಮಹಿಳೆಯರಲ್ಲಿ ಅಗಾಧ ಶಕ್ತಿ ಇದೆ ಸದುಪಯೋಗವಾಗಲಿ – ಭಾರತಿ ದರ್ಶನಾಪುರ
ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ
ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ
ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ
ಮಹಿಳೆಯರಲ್ಲಿ ಅಗಾಧ ಶಕ್ತಿ ಇದೆ ಸದುಪಯೋಗವಾಗಲಿ
ವಿನಯವಾಣಿ
ಶಹಾಪುರ: ಮಹಿಳೆಯರಲ್ಲಿ ಅಗಾಧವಾದ ಜ್ಞಾನ, ಸಾಮರ್ಥ್ಯ ವಿದೆ. ಛಲವಿದೆ ಆದರೆ ಉತ್ತಮ ಅವಕಾಶ ಕಲ್ಪಿಸಿದಾಗ ಮಾತ್ರ ಅವರ ಶಕ್ತಿ ಏನೆಂಬುದು ತಿಳಿಯಲಿದೆ ಎಂದು ಭಾರತಿ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಫಕಿರೇಶ್ವರ ಮಠದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದು ಅವರು ಅಬಲೆಯರಲ್ಲ ಸಬಲೆಯರು ಎಂದು ಸಾಬೀತು ಮಾಡಿದ್ದಾರೆಂದರು.
ಮಹಿಳಾ ಕೌಶಲ್ಯ ಅಭಿವೃದ್ಧಿ ಪ್ರಮುಖರಾದ ಸೇಡಂನ ವಿಕಾಸ ಅಕಾಡೆಮಿಯ ಲಕ್ಷ್ಮೀ ಸಿಂಪಿ ಮಾತನಾಡಿ,
ಮಹಿಳೆಯರು ಆರ್ಥಿಕ ನಿರ್ವಹಣೆ ಯನ್ನು ಚನ್ನಾಗಿ ಮಾಡಬಲ್ಲವರಾಗಿದ್ದು, ಅದನ್ನು ಸಮರ್ಪಕವಾಗಿ ನಿಭಾಯಿಸುವ ಕಲೆ ನಿಮ್ಮೊಳಗಿದ್ದು, ಅದರ ಸದುಪಯೋಗ ಪಡೆಯಬೇಕು.
ಕೌಶಲ್ಯಾಧರಿತ ಸಣ್ಣ ಸಣ್ಣ ಗುಡಿ ಕೈಗಾರಿಕೆ ಮೂಲಕ ಮಹಿಳೆ ತನ್ನ ಅಭಿವೃದ್ಧಿ ಜೊತೆಗೆ ನಾಲ್ಕು ಜನಕ್ಕೆ ಕೆಲಸ ಕೊಡುವಂತ ಕಾರ್ಯ ಮಾಡಬೇಕು. ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಕಾಣುತ್ತಿದ್ದೇವೆ.
ಮನೆಗೆಲಸದಲ್ಲಿ ಮಕ್ಕಳನ್ನು ಕರೆದುಕೊಂಡು ಕೆಲಸ ಮಾಡಿ, ಅವರಿಗೂ ನೀವು ಮಾಡುವ ಕೆಲಸದಬಗ್ಗೆ ಗೊತ್ತಿರಲಿ ಅದನ್ನು ಅವರು ಮುಂದುವರೆಸಲಿ. ರೊಟ್ಟಿ ಕೇಂದ್ರ, ಹೊಲಿಗೆ ಕೇಂದ್ರ, ಹಣೆಗೆ ಹಚ್ಚುಚ ಕುಂಕುಮ, ಸ್ಟಿಕರ್ ಸೇರಿದಂತೆ ಕೌದಿ ಕಸೂತಿ ಇತರೆ ಸಾವಿರಾರು ಕೌಶಲ್ಯ ತರಬೇತಿಗಳನ್ನು ಧರ್ಮಸ್ಥಳ ಸಂಸ್ಥೆ ನೀಡಲಾಗುತ್ತಿದ್ದು ಅದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಧಾರವಾಹಿಗಳನ್ನು ನೋಡುವದರಿಂದ ಅದರಲ್ಲಿನ ಮನೆಹಾಳು ಮಾಡುವ ಬುದ್ದೀಯೇ ಬರುತ್ತದೇ ಹೊರತು ಯಾವ ಧಾರಾವಾಹಿಗಳು ಮಹಿಳಾ ಸಾಧನೆಯ ಮಾರ್ಗ ತೋರುವದು ನಾ ಕಾಣೆ ಎಂದರು.
ಜ್ಞಾನ ವಿಕಾಸ ಕೇಂದ್ರದ ಪ್ರಾದೇಶಿಕ ಯೋಜನಾಧಿಕಾರಿ ಜ್ಯೋತಿ ಜೋಳದ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಸ್ಥೆಯ ಜ್ಞಾನ ವಿಕಾಸದಡಿ ಭಾಗವಹಿಸಿ ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಮಹಿಳೆ ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆಯಡಿ ಹಲವು ಚಟುವಟಿಕೆಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಓರ್ವ ಮಹಿಳೆ ಸ್ವಾವಲಂಬಿಯಾದರೆ ಇಡಿ ಕುಟುಂಬ ಸ್ವಾವಲಂಬಿ ಆಗುವ ದರಲ್ಲಿ ಸಂಶಯವಿಲ್ಲ ಎಂದರು.
ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಕಲಾ ಗೂಗಲ್ ಮಾತನಾಡಿ, ಮಹಿಳೆಯರು ಉದ್ಯೋಗವನ್ನು ಸೃಷ್ಟಿಸುವ ಮಹಿಳೆಯರಾಗಬೇಕು ಹೊರತು ಉದ್ಯೋಗವನ್ನು ಅರಸಿ ವಲಸೆ ಹೋಗುವ ಮಹಿಳೆಯರಾಗಬಾರದು. ಈ ದೇಶದ ನೆಲದಲ್ಲಿ ಜನಿಸಿದ ಮಹಿಳೆಯರಿಗೆ ಅಗಾಧ ಶಕ್ತಿ ಇದೆ. ಪಾರಂಪಾರಿಕವಾಗಿ ಮಹಿಳೆಯರನ್ನು ಇಲ್ಲಿ ಆದಿಶಕ್ತಿಗೆ ಹೋಲಿಸಲಾಗುತ್ತದೆ. ಹೀಗಾಗಿ ಮೂಲತಃ ಮಹಿಳೆಯರಿಗೆ ಆ ಶಕ್ತಿದೇವತೆಯ ವರವಿದ್ದು, ಅದೆಂತದೇ ಸಮಸ್ಯೆ, ಬಡತನ ಕೌಟಿಂಬಿಕ ಕಿರಿಕಿರಿ ಇರಲಿ ಅದೆಲ್ಲವನ್ನು ಮೆಟ್ಡಿ ನಿಂತು ಸ್ವಾಭಿಮಾನದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದರು. ಧರ್ಮಸ್ಥಳ ಸಂಸ್ಥೆಯು ಸರ್ಕಾರ ಮಾಡದಂತ ಹಲವು ಜನೋಪಯೋಗಿ ಕೆಲಸಗಳು ಮಾಡುತ್ತಿರುವದು ಶ್ಲಾಘನೀಯ ಎಂದರು.
ಸಾನ್ನಿಧ್ಯವಹಿಸಿದ್ದ ಶ್ರೀಮಠದ ಗುರುಪಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಮುದ್ನೂರ, ನ್ಯಾಯವಾದಿ ಶೈಲಜಾ ಹೊನ್ನಾರಡ್ಡಿ, ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕ ದತ್ತಾತ್ರೇಯ, ನಗರ ಶಾಖೆಯ ಯೋಜನಾಧಿಕಾರಿ ಕುಮಾರ ಬಣಕಾರ್, ಯುವ ಸಾಹಿತಿ ಬಸವರಾಜ ಸಿನ್ನೂರ ಉಪಸ್ಥಿತರಿದ್ದರು.




