ಸರ್ಕಾರಿ ಆಸ್ಪತ್ರೆಗೆ ಡಿಸಿ ಭೇಟಿ, ಮುಂಜಾಗೃತ ಕ್ರಮಕ್ಕೆ ಸೂಚನೆ

ಓಮಿಕ್ರಾನ್ ನಿಯಂತ್ರಣಕ್ಕೆ ಪೂರ್ವ ಸಿದ್ಧತೆಗೆ ರಾಗಪ್ರಿಯ ಖಡಕ್ ಸೂಚನೆ
yadgiri, ಶಹಾಪುರಃ ಕಳೆದ ಎರಡು ವರ್ಷದಿಂದ ಬೆಂಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿ ಹೊಸ ರೂಪಾಂತರ ವೈರಸ್ ಓಮಿಕ್ರಾನ್ ಎಲ್ಲಡೆ ಹರಡುತ್ತಿದ್ದು, ಮುಂಜಾಗೃತ ಕ್ರಮವಾಗಿ ಓಮಿಕ್ರಾನ್ ನಿಯಂತ್ರಣಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಸೂಚನೆ ನೀಡಿದರು.
ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಓಮಿಕ್ರಾನ್ ನಿಯಂತ್ರಣಕ್ಕೆ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ ಹಲವಾರು ಸೂಚನೆಗಳನ್ನು ನೀಡಿ, ಸಉದ್ದಿಗಾರರೊಂದಿಗೆ ಅವರು ಮಾತನಾಡಿದರು.
100 ಬೆಡ್‍ಗಳುಳ್ಳ ಹಾಸಿಗೆ ಮತ್ತು 25 ಐಸಿಯು ಬೆಡ್ ಹಾಗೂ 70 ಆಕ್ಸಿಜನ್ ವ್ಯವಸ್ಥೆ ಸೇರಿದಂತೆ 180 ಸಿಲೆಂಡರ್ ವ್ಯವಸ್ಥೆ ಇದೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಸಮರ್ಪಕವಾಗಿ ಎದುರಿಸಲು ಆರೋಗ್ಯ ಇಲಾಖೆಯೊಂದಿಗೆ ಜಿಲ್ಲಾಡಳಿತ ಸಜ್ಜಾಗಿದೆ. ಆಕ್ಸಿಜನ್ ತಯಾರಿಕಾ ಘಟಕದ ಕಾರ್ಯವು ಪ್ರಗತಿಯಲ್ಲಿದೆ. ಆಕ್ಸಿಜನ್ ಪೈಪ್ ಲೈನ್ ಸಂಪರ್ಕ ಕಾರ್ಯ ಮುಗಿದಿದೆ. ಅಲ್ಲದೆ ಇಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಇನ್ನಷ್ಟು ‘ಡಿ’ ಗ್ರೂಪ್ ಮತ್ತು ವೈದ್ಯರ ನೇಮಕಾತಿ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಆರ್‍ಸಿಎಚ್ ಜಿಲ್ಲಾ ಅಧಿಕಾರಿ ಡಾ.ಲಕ್ಷ್ಮಿಕಾಂತ, ತಾಲೂಕಾ ನೋಡಲ್ ಅಧಿಕಾರಿ ಡಾ.ಭಗವಂತ ಅನವಾರ, ತಸಶೀಲ್ದಾರ ಮಧುರಾಜ ಕೂಡ್ಲಿಗಿ, ಪೌರಾಯುಕ್ತ ಓಂಕಾರ ಪೂಜಾರಿ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ್, ಟಿಎಚ್‍ಓ ಡಾ.ರಮೇಶ ಗುತ್ತೇದಾರ, ಜೆಸ್ಕಾಂ ಎಇಇ ಶಾಂತಪ್ಪ ಪೂಜಾರಿ, ಕಂದಾಯ ಇಲಾಖೆಯ ಗಿರೀಶ್ ಸೇರಿದಂತೆ ಇತರರಿದ್ದರು.
ವೈದ್ಯ ಮತ್ತು ‘ಡಿ’ ಗ್ರೂಪ್ ನೇಮಕಕ್ಕೆ ಖಡಕ್ ವಾರ್ನಿಂಗ್
ಇಲ್ಲಿನ ನಗರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ‘ಡಿ’ ಗ್ರೂಪ್ ನೌಕರರ ನೇಮಕ ಮಾಡಿಕೊಳ್ಳದಿರವ ಬಗ್ಗೆ ಮತ್ತು ಖಾಲಿ ಇರುವ ವಿವಿಧ ರೋಗ ತಜ್ಞ ವೈದ್ಯರ ನೇಮಕ ಮಾಡಿಕೊಳ್ಳದಿರುವ ಕುರಿತು ಡಿಎಚ್‍ಓ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ಡಿ ಗ್ರೂಪ್ ನೌಕರರು ಸೇರಿದಂತೆ ಸಮರ್ಪಕ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದರು. ನಗರದ ಆಸ್ಪತ್ರೆಯಲ್ಲೂ ಸ್ವಚ್ಛತೆ ಕಾಪಾಡಿ ಮತ್ತು ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ಲಸಿಕೆಯಲ್ಲಿ ಶಹಪುರ ಮುಂದು, ಚಕ್ ಪೋಸ್ಟ್‍ನಲ್ಲಿ ಸೂಕ್ತ ಕೋಣೆ ನಿರ್ಮಾಣ
ಜಿಲ್ಲಾದಾದ್ಯಂತ ಕೋವಿಡ್ ಲಸಿಕೆ ಮೊದಲನೇ ಡೋಸ್ ಶೇ.90 ರಷ್ಟು ಆಗಿದೆ. ಎರಡನೇ ಡೋಸ್ ಶೇ.50 ರಷ್ಟು ಹಾಕಲಾಗಿದೆ. ಶಹಪುರ ಮತ್ತು ಯಾದಗಿರಿಯಲ್ಲಿ ಅತಿ ವೇಗವಾಗಿ ಲಸಿಕಾಕರಣ ನಡೆದಿದೆ. ಜನರ ಸಹಕಾರವು ಮುಖ್ಯವಿದೆ. ಗ್ರಾಮೀಣ ಭಾಗದಲ್ಲಿ ಇನ್ನೂ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ 10 ಚಕ್ ಪೋಸ್ಟ್ ಗಳಿ ಮಾಡಲಾಗಿದ್ದು, ವಾರದಲ್ಲಿ ರೆಡಿಮೇಡ್ ಫೈಬರ್ ಯುಕ್ತ ಎಲ್ಲಾ ಸಲಕರಣೆಗಳಿರುವ ಕೇಂದ್ರ ಸ್ಥಾಪಿಸಲಾಗುವದು. ಮೂರು ತಿಂಗಳ ಹಿಂದೆಯೇ ಚಕ್ ಪೋಸ್ಟ್ ನಲ್ಲಿ ರೆಡಿಮೇಡ್ (ಕೋಣೆ) ಕಚೇರಿ ತಯಾರಿಸುವದಕ್ಕೆ ಆರ್ಡ್‍ರ್ ಮಾಡಲಾಗಿದೆ. ಶೀಘ್ರದಲ್ಲಿ ಸಿಬ್ಬಂದಿಗೆ ಅಲ್ಲಿ ತಕ್ಕ ಕೋಣೆ ನಿರ್ಮಾಣವಾಗಲಿದೆ.
-ಡಾ.ರಾಗಪ್ರಿಯ. ಜಿಲ್ಲಾಧಿಕಾರಿಗಳು. ಯಾದಗಿರಿ.