ಪ್ಯಾರಿಸ್‌ನಿಂದ ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ
ಪ್ಯಾರಿಸ್: 306 ಮಂದಿಯನ್ನು ಹೊತ್ತು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಿಂದ ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಬೆನ್ನಲ್ಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಯುಕೆ 024 ವಿಮಾನವು ಏರ್ ಸಿಕ್‌ನೆಸ್ ಬ್ಯಾಗ್‌ನಲ್ಲಿ ಬಾಂಬ್ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ 10.08 ಕ್ಕೆ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಇಂದು ಬೆಳಗ್ಗೆ 10.19ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿದೆ.
ಪ್ಯಾರಿಸ್-ಮುಂಬೈ ಹೊರಟಿದ್ದ ವಿಮಾನದಲ್ಲಿ 12 ಸಿಬ್ಬಂದಿ ಹಾಗೂ 294 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಪ್ರೋಟೋಕಾಲ್ ಅನ್ನು ಅನುಸರಿಸಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ತಪಾಸಣೆಗಾಗಿ ಭದ್ರತಾ ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ. ಪೊಲೀಸರು ತನಿಖೆಯಲ್ಲಿ ತೊಡಗಿದ್ದು, ನಿರಂತರವಾಗಿ ಶೋಧ ನಡೆಸುತ್ತಿದ್ದಾರೆ ಎಂದು ವಿಸ್ತಾರಾ ಏರ್‌ಲೈನ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ.