ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
ರೈತ, ಕಾರ್ಮಿಕರ ಸಮಾಧಿ ಮೇಲೆ ರಾಜ್ಯಭಾರ
yadgiri, ಶಹಾಪುರ: ರೈತ, ಕಾರ್ಮಿಕ ನೀತಿ ವಿರೋಧಿ ನಡೆ ಅನುಸರಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಿನ ಇಲ್ಲಿನ ಜಿಲ್ಲಾ ಸಂಯುಕ್ತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚನ್ನಪ್ಪ ಆನೇಗುಂದಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ರೈತ, ಕಾರ್ಮಿಕ ಸಮಾಧಿ ಮೇಲೆ ಆಡಳಿತ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಜನ ವಿರೋಧಿ ಫಾಸಿಸ್ಟ್ ಮೋದಿ ಸರ್ಕಾರ ತೊಲಗಿಸಿ ಎಂದು ಕರೆ ನೀಡಿದರು.
ಕಾರ್ಮಿಕ ಮುಖಂಡ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ಕೃಷಿಕರ ಬದುಕು ಬರುಡಾಗಿದ್ದು, ಕೊರೊನಾ ಮಹಾಮಾರಿ ಸೇರಿದಂತೆ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಾಕಷ್ಟು ತೊಂದರೆಯೊಳಗಗಿದ್ದಾರೆ. ಪ್ರಸ್ತುತ ಕಾಲದಲ್ಲಿ ಕೃಷಿ ಕಡೆ ಮನಸ್ಸು ಮಾಡದ ಯುವ ಸಮೂಹದಿಂದ ಕೃಷಿ ಕ್ಷೇತ್ರ ಸೊರಗುತ್ತಿದೆ.
ಸ್ವಾತಂತ್ರ್ಯ ವೇಳೆ 33 ಸಾವಿರ ಕೋಟಿ ಜನರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದೇವು. ಈಗ 140 ಕೋಟಿ ಜನರಿಗೆ ಆಹಾರ ಒದಗಿಸುವಲ್ಲಿ ಶ್ರಮವಹಿಸುತ್ತಿದೇವೆ. ಕೊರೊನಾ ಹಾವಳಿಯಿಂದ ವಿವಿಧ ಕ್ಷೇತ್ರಗಳು ಆರ್ಥಿಕವಾಗಿ ಕುಸಿದಿವೆ. ಆದರೆ ಕೃಷಿ ಕ್ಷೇತ್ರ ಮಾತ್ರ ಉತ್ಪಾದನೆಯಲ್ಲಿ ದಾಖಲೆ ಮಾಡಿದೆ ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಶ್ರಮ ಪರಿಗಣಿಸಲಿ ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಯಲ್ಲಿ ಇಲ್ಲಿವರೆಗೆ 520 ಜನ ರೈತರು ಹುತಾತ್ಮರಾಗಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು. ಕ.ಪ್ರಾಂ.ರೈ.ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಾಗರ, ಕ.ಪ್ರಾ.ಕೃ.ಕೂ.ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ ನದಾಫ್, ಜಿಲ್ಲಾ ಕಾರ್ಯದರ್ಶಿ ಜೈಲಾಲ ತೋಟದಮನಿ, ಭೀಮಣ್ಣ ನಾಯ್ಕೋಡಿ, ಹೊನ್ನಪ್ಪ ಮಾನ್ಪಡೆ ಸೇರಿದಂತೆ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.