
ಸಗರ ಗ್ರಾಮದಲ್ಲಿ ಬಣ್ಣದೋಕುಳಿ ಸಂಭ್ರಮ
yadgiri, ಶಹಾಪುರಃ ಹೋಳಿ ಹಬ್ಬದಂಗವಾಗಿ ತಾಲೂಕಿನ ಸಗರ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಮದಹನ ಮಾಡಿ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೂ ಬಣ್ಣದೋಕುಳಿಯಲ್ಲಿ ಮಿಂದೆದ್ದು, ಚಿಣ್ಣರು, ಯುವಕರು ಹಿರಿಯರು ಸಂಭ್ರಮಿಸಿದರು.
ಮಕ್ಕಳು ಕೊರಳಲಿ ಬಣ್ಣದ ಸಿಹಿ ತಿಂಡಿನ ಹಾರ ಹಾಕಿಕೊಂಡು ಅದನ್ನು ತಿನ್ನುತ್ತಾ ಖುಷಿಯಿಂದ ಬಣ್ಣದಬ್ಬವನ್ನು ಆಚರಿಸಿದರು.
ಗುರುವಾರ ರಾತ್ರಿ ಕಟ್ಟಿಗೆ, ಬೆರಣಿಗಳಿಂದ ಗೂಡು ಕಟ್ಟಿ ಅದರೊಳು ಕೈಯಿಂದ ಚಿತ್ರ ಬಿಡಿಸಿದ ಕಾಮನ ಭಾವಚಿತ್ರವಿಟ್ಟು, ಮೊದಲು ಭಕ್ತಿ ಪೂರ್ವಕವಾಗಿ ದೀಪ ಮುಡಿಸಿ, ಹೋಳಿಗೆ, ಅನ್ನ ನೈವೇದ್ಯ ಅರ್ಪಿಸಿ ಪೂಜಿಸಿ ಅವಗುಣಗಳನ್ನೆಲ್ಲ ಬೆಂಕಿಗಾಹುತಿ ನೀಡುವ ಸಂಕಲ್ಪ ಮಾಡಿ ಸಾಮೂಹಿಕವಾಗಿ ಕಾಮದಹನ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇಸಿದ್ದರು.
ಬೆಳಗ್ಗೆ ಶುಕ್ರವಾರ ಪರಸ್ಪರರು ಬಣ್ಣ ಬಳಿಯುವ ಮೂಲಕ ಖುಷಿಯನ್ನು ಹಂಚಿಕೊಂಡರು. ಮನೆ ಮನೆ ಹೋಗಿ ಬಣ್ಣವನ್ನು ಹಚ್ಚುವ ಮೂಲಕ ಯುವಕರು ಗುಂಪು ಗುಂಪಾಗಿ ಒಂದಡೆ ಸೇರಿ ಹಲಗೆ ಇತರೆ ವಾದ್ಯಗಳ ನಾದಕ್ಕೆ ಕುಣಿದು ಕುಪ್ಪಳಿಸಿದರು. ಕೋವಿಡ್ ನಿಂದಾಗಿ ಕಳೆದೆರಡು ವರ್ಷ ಹೋಳಿ ಹಬ್ಬದಲ್ಲಿ ಭಾಗವಹಿಸದ ಯುವ ಸಮೂಹ ಈ ಬಾರಿ ಬಲು ಖುಷಿಯಿಂದಲೇ ಬಣ್ಣದೋಕುಳಿಯಲ್ಲಿ ಮಿಂದೆದ್ದು ಖುಷಿಯಾಗಿ ಹಾಡು, ಕುಣಿತದಲ್ಲಿ ಭಾಗವಹಿಸಿರುವದು ಕಂಡು ಬಂದಿತು.