ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ-ಡಾ.ಪ್ರಿಯಾ
ನಗರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ
yadgiri, ಶಹಾಪುರಃ ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ಕಾಳಜಿವಹಿಸಬೇಕು. ಅಲ್ಲದೆ ಕೋವಿಡ್ ಬಗ್ಗೆ ಎಚ್ಚರಿಕೆವಹಿಸಬೇಕು. ಪಾಲಕರೆಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಮೂರನೇಯ ಅಲೆ ಮುನ್ಸೂಚನೆ ನೀಡಿರುವ ಹಿನ್ನೆಲೆ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಆಯುಷ್ ವೈದ್ಯೆ ಡಾ.ಪ್ರಿಯಾ ತಿಳಿಸಿದರು.
ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಿಗೆ ಯಾವುದೇ ಸಣ್ಣ ಪುಟ್ಟ ರೋಗಬಾಧೆಗಳು ಕಂಡು ಬಂದಲ್ಲಿ ನಿಷ್ಕಾಳಜಿವಹಿಸದೆ ತಕ್ಷಣ ಆರೋಗ್ಯ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಬೇಕು.
ಕೋವಿಡ್ ಮಹಾಮಾರಿ ಯಾವ ರೀತಿಯಲ್ಲಿ ಅಪ್ಪಳಿಸಲಿದೆಯೋ ಗೊತ್ತಿಲ್ಲ. ಅದರ ರೂಪಾಂತರತೆಯಿಂದ ಮಾನವ ದುರ್ಬಲತೆಗೊಳಗಾಗುತ್ತಿದ್ದು, ಎಲ್ಲರೂ ಲಸಿಕೆ ಪಡೆದುಕೊಂಡು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಮುಗೀತು ಎಂದುಕೊಂಡು ಮೈಮರೆಯಬೇಡಿ.
ಯಾವ ರೂಪದಲ್ಲಿ ಮತ್ತೆ ಸಂಕಷ್ಟ ತಂದೊಡ್ಡಲಿದೆಯೋ ಗೊತ್ತಿಲ್ಲ. ಮಕ್ಕಳಿಗೂ ಲಸಿಕೆ ಶೋಧನೆ ನಡೆದಿದ್ದು, ಶೀಘ್ರದಲ್ಲಿ ಮಕ್ಕಳ ಕೊರೊನಾ ಲಸಿಕೆ ಬರಲಿದೆ. ಮಕ್ಕಳು ಸೇರಿದಂತೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ಒಂದು ವರ್ಷ ಕೊರೊನಾ ನಿಯಮಗಳನ್ನು ಸಮರ್ಪಕವಾಗಿ ಎಲ್ಲರೂ ಪಾಲಿಸಿದಲ್ಲಿ ಕೊರೊನಾವನ್ನು ಓಡಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಡಾ.ರಹೆಮಾನ್, ಹಿರಿಯ ಆರೋಗ್ಯ ಸಹಾಯಕ ಮಲ್ಲಪ್ಪ ಕಾಂಬ್ಳೆ ಮತ್ತು ಪ್ರಮೀಳಾ ಜಾನ್ ಸೇರಿದಂತೆ ಆರೋಗ್ಯ ನಿರೀಕ್ಷಣಾಧಿಕಾರಿ ದೀಪಾ, ಲ್ಯಾಬ್ ಟೆಕ್ನಿಷಿಯನ್ ಅನೀತಾ, ಮಹ್ಮದ್ ಗೌಸ್, ರಾಘವೇಂದ್ರ ಉಪಸ್ಥಿತರಿದ್ದರು. ಬಡಾವಣೆ ತಾಯಂದಿರು, ಮಕ್ಕಳು ಭಾಗವಹಿಸಿದ್ದರು. ನೂರಾರು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.