ಶಿವರಾತ್ರಿ ಬಂತಂದ್ರೆ ಶಿರವಾಳದ ‘ಶಿವ’ ನೆನಪು – ಕಾಳಹಸ್ತೇಂದ್ರ ಶ್ರೀ
ಶಿರವಾಳ ಗ್ರಾಮದಲ್ಲಿ ಶಿವಶೇಖರಪ್ಪ ಗೌಡರ 13ನೇ ಪುಣ್ಯಸ್ಮರಣೆ
ಶಿವರಾತ್ರಿ ಬಂತಂದ್ರೆ ಶಿರವಾಳದ ‘ಶಿವ’ ನೆನಪು – ಕಾಳಹಸ್ತೇಂದ್ರ ಶ್ರೀ
ಶಿರವಾಳ ಗ್ರಾಮದಲ್ಲಿ ಶಿವಶೇಖರಪ್ಪ ಗೌಡರ 13ನೇ ಪುಣ್ಯಸ್ಮರಣೆ
13 ವರ್ಷ ಕಳೆದರೂ ಅಚ್ಚಳಿಯದೆ ಉಳಿದ ಗೌಡರ ಹೆಸರು
yadgiri, ಶಹಾಪುರಃ ಜನಸಾಮಾನ್ಯರ ಬದುಕಿಗೆ ಆಸರೆಯಾಗಿ ದುಡಿಯುವ ವರ್ಗದವರ ಬೆವರಿಗೆ ಬೆಲೆ ತಂದು, ಮಾನವ ಧರ್ಮದ ಅಡಿಯಲ್ಲಿ ಜನನಾಯಕನಾಗಿ, ಅಭಿಮಾನಿಗಳ ಹೃದಯದಲ್ಲಿ ನೆಲೆಸಿದವರು ಲಿಂ.ಶಿವಶೇಖರಪ್ಪಗೌಡ ಶಿರವಾಳರು ಎಂದು ಅನ್ನದಾನ ಸ್ವಾಮಿಗಳು ತಿಳಿಸಿದರು.
ತಾಲೂಕಿನ ಶಿರವಾಳ ಗ್ರಾಮದಲ್ಲಿ ಲಿಂ.ಶಿವಶೇಖರಪ್ಪ ಗೌಡರ 13ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಲಿಂಗೈಕ್ಯರಾಗಿ 13 ವರ್ಷ ಕಳೆದರೂ ಅವರು ಇನ್ನೂ ನಮ್ಮೆಲ್ಲರ ಕಣ್ಮುಂದೆ ಇದ್ದಾರೆ ಎಂಬುದಕ್ಕೆ ಪ್ರಸ್ತುತ ಅವರ ಅಭಿಮಾನಿ ಬಳಗದ ಉಪಸ್ಥಿತಿಯೇ ಸಾಕ್ಷಿಯಾಗಿದೆ. ಓರ್ವ ಜನ ನಾಯಕನಾಗಿ ಸಮಾಜಮುಖಿಯಾಗಿ ಹೇಗೆ ಬದುಕು ರೂಡಿಸಿಕೊಳ್ಳಬೇಕು ಎಂಬುದನ್ನು ಅವರಿಂದ ಕಲಿಯಬೇಕು.
ಮಾತಿನಲ್ಲಿ, ಕೆಲಸದಲ್ಲಿ, ಮನಸ್ಸಿನಲ್ಲಿ ಸದಾ ಕಾಲ ಉತ್ಸಾಹಭರಿತರಾಗಿದ್ದ ಅವರು ಬದುಕಿನುದ್ದಕ್ಕೂ ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿದ್ದರು. ಧರ್ಮ ಕಾರ್ಯ, ಶಿಕ್ಷಣ, ಕೃಷಿ, ಗ್ರಾಮೀಣ ಜನರ ಬದುಕಿಗೆ ಸಹಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಗೌಡರ ಕೊಡುಗೆ ಅನುಪಮವಾಗಿದೆ ಎಂದರು.
ಏಕದಂಡಗಿ ಮಠದ ಕಾಳಹಸ್ತೇಂದ್ರ ಶ್ರೀಗಳು ಮಾತನಾಡಿ, ಶಿವರಾತ್ರಿ ಬಂತೆಂದ್ರೆ ಸರ್ವೇ ಸಾಮಾನ್ಯವಾಗಿ ಶಿವನ ನೆನಪಾಗುತ್ತಾನೆ. ಆದರೆ ಸಗರನಾಡಿನ ಭಾಗದ ಜನರಿಗೆ ಶಿವರಾತ್ರಿ ಬಂತಂದ್ರೆ ಶಿರವಾಳದ ಶಿವಶೇಖರಪ್ಪಗೌಡರು ನೆನಪಾಗುತ್ತಾರೆ.
ಶಿವಶೇಖರಪ್ಪಗೌಡರು ಹಸನ್ಮುಖಿ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ, ಯಾರಿಗೂ ನೋವಾಗದ ರೀತಿಯಲ್ಲಿ ಮಾತನಾಡುವ ಸಜ್ಜನಿಕೆ, ಪರೋಪಕಾರ ಪ್ರವೃತ್ತಿ ಮರೆಯುವಂತಿಲ್ಲ. ಧರ್ಮ ಕಾರ್ಯದಲ್ಲಿ ಗೌಡರ ಮನೆತನ ಮೇಲ್ಪಂಕ್ತಿಯಾಗಿದೆ. ಇಂದಿಗೂ ಅವರ ಸಹೋದರ ಶಿವಪುತ್ರಪ್ಪಗೌಡ ಶಿರವಾಳ, ಪುತ್ರ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಹಿರಿಯ ಮುಖಂಡರಾದ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ ಮಾತನಾಡಿ ಗೌಡರ ಜತೆ ಕೆಲಸ ಮಾಡಿರುವದನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಉಚಿತ ಕಣ್ಣಿನ, ಹೃದ್ರೋಗ, ಮೊಣಕಾಲು ತಪಾಸಣೆ ಜರುಗಿತು. ಅಲ್ಲದೆ ಶಸ್ತ್ರ ಚಿಕಿತ್ಸೆ ಅರ್ಹತೆ ಇದ್ದವರಿಗೆ ಬುಧವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ನೂರಾರು ಜನ ತಪಾಸಣೆಗೊಳಪಟ್ಟರು.
ಕಾರ್ಯಕ್ರಮದಲ್ಲಿ ಗುರುಪಾದ ಮಹಾಸ್ವಾಮಿಗಳು, ಗುರುಮಠಕಲ್ ಖಾಸಾ ಮಠದ ಶಾಂತ ಮುರುಘರಾಜೇಂದ್ರ ಸ್ವಾಮಿಗಳು, ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಒಕ್ಕಲಿಗೇರ ಮಠದ ಮರುಳಮಹಾಂತ ಶಿವಾಚಾರ್ಯರು, ನಾಗಠಾಣ ಮಠದ ಪೂಜ್ಯರು, ಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು, ಅಜೇಂದ್ರ ಮಹಾಸ್ವಾಮಿಗಳು, ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಮದ್ರಿಕಿಯ ಶೀಲವಂತ ಶಿವಾಚಾರ್ಯರು, ವಿಶ್ವರಾಧ್ಯ ದೇವರು, ಕೆಂಭಾವಿಯ ಚನ್ನಬಸವ ಸ್ವಾಮಿಗಳು, ಚನ್ನಮಲ್ಲ ಮಹಾಸ್ವಾಮಿಗಳು, ದೇವರಗುಡ್ಡದ ಪೂಜ್ಯರು, ನಾಗೂರದ ಪೂಜ್ಯರು, ದೇವಯ್ಯ ಅರ್ಚಕರು, ಸಿದ್ದಯ್ಯ ಸ್ವಾಮಿಗಳು ಶಿರವಾÀಳ, ಯಾಳಗಿ ಶಾಸ್ತ್ರಿಗಳು, ಬಿದರಾಣಿಯ ಪೂಜ್ಯರು, ಸೇರಿದಂತೆ ಶಿರವಾಳ ಗೌಡರ ಕುಟುಂಬದವರು, ಗ್ರಾಮಸ್ಥರು, ಅಭಿಮಾನಿಗಳು, ಹಿತೈಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸರ್ವರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು, ಶ್ರೀಕಾಂತ ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವರಾಜ ಯಲಿಕೂಡಲಿಗಿ ನಿರ್ವಹಿಸಿದರು. ವಿವಿಧ ಗ್ರಾಮಗಳಿಂದ, ತಾಲೂಕುಗಳಿಂದ, ಪ್ರಮುಖರು ಭಾಗವಹಿಸಿದ್ದರು.