ಶಹಾಪುರಃ ಆಟೋಗಳಿಗೆ ಕ್ರಮಸಂಖ್ಯೆ ನೀಡಿಕೆ, ದಾಖಲಾತಿ ಸಂಗ್ರಹ

ಆಟೋಗಳಿಗೆ ಕ್ರಮಸಂಖ್ಯೆ ನೀಡಿಕೆ, ದಾಖಲಾತಿ ಸಂಗ್ರಹ
yadgiri, ಶಹಾಪುರಃ ಜಿಲ್ಲೆಯಲ್ಲಿ ಕ್ರೈಂ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಹಿನ್ನೆಲೆ ಪ್ರತಿ ಆಟೋ ಚಾಲಕರು ಮತ್ತು ಮಾಲೀಕರ ಸಂಪೂರ್ಣ ಮಾಹಿತಿ ಆಯಾ ಠಾಣಾ ವ್ಯಾಪ್ತಿಯಲ್ಲಿರಬೇಕು. ಹೀಗಾಗಿ ಪ್ರತಿ ಆಟೋಗಳಿಗೆ ಕ್ರಮ ಸಂಖ್ಯೆ ನೀಡಲಾಗುತ್ತಿದೆ. ಎಲ್ಲರೂ ಸಮರ್ಪಕ ದಾಖಲಾತಿ ಠಾಣೆಗೆ ನೀಡುವ ಮೂಲಕ ಆಟೋಗೆ ಕ್ರಮ ಸಂಖ್ಯೆ ಪಡೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ತಿಳಿಸಿದರು.
ನಗರ ಠಾಣೆಯ ಸಭಾಂಗಣದಲ್ಲಿ ಆಟೋ ಚಾಲಕರ ಸಭೆ ಹಾಗೂ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ವಾರದೊಳಗೆ ಎಲ್ಲಾ ಆಟೋಗಳ ಸಮರ್ಪಕ ದಾಖಲಾತಿ ಠಾಣೆಗಳಿಗೆ ನೀಡಿ ಪ್ರತಿ ಆಟೋಗೆ ಕ್ರಮ ಸಂಖ್ಯೆ (ಗುರುತಿನ ಸಂಖ್ಯೆ) ಪಡೆಯಬೇಕು ಎಂದು ಗಡುವು ನೀಡಿದರು. ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಆಟೋ ಚಾಲಕರು ಠಾಣೆಗೆ ಮಾಹಿತಿ ನೀಡಬೇಕು.
ಮೊನ್ನೆ ನಡೆದ ಎರಡು ಪ್ರತ್ಯೇಕ ಘಟನೆಗಳು ಸಮಾಜದಲ್ಲಿ ತಲೆ ತಗ್ಗಿಸುವಂತಾಗಿವೆ. ಅತ್ಯಾಚಾರದಂತ ಕೃತ್ಯದಲ್ಲಿ ತೊಡಗಿದ ಆರೋಪಿಗಳು ಕಾನೂನಿನಡಿ ಬಂಧಿಯಾಗಿದ್ದು, ಮುಂದೆ ಸಾರ್ವಜನಿಕ ಜೀವನದಲ್ಲಿ ಅವರು ಗುರುತಿಸಿಕೊಂಡು ಬದುಕುವದು ಕಷ್ಟಕರವಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಎಚ್ಚರಿಸಿದರು.
ಪ್ರತಿ ಚಾಲಕ ಯೂನಿಫಾರಂ ಧರಿಸಿರಬೇಕು. ಖಾಕಿ ನಾವು ತೊಡುತ್ತೇವೆ ನೀವು ಖಾಕಿ ತೊಡುತ್ತೀರಿ. ಖಾಕಿ ಸೇವಾ ಸಂಕೇತವಾಗಿದ್ದು, ಸೇವಾ ಮನೋಭಾವದಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. ಆಟೋದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಳ್ಳಬಾರದು ಸಾಕಷ್ಟು ದೂರುಗಳು ಬಂದಿದ್ದು, ಈ ಕುರಿತು ಜವಬ್ದಾರಿಯಿಂದ ನಡೆದುಕೊಳ್ಳಬೇಕು. ಈಗಾಗಲೇ 90 ಆಟೋಗಳಿಗೆ ಕ್ರಮ ಸಂಖ್ಯೆ ಅನುಸಾರ ನಂಬರ್ ನೀಡಿದ್ದು, ಇನ್ನುಳಿದ ಆಟೋಗಳು ಸಮರ್ಪಕ ದಾಖಲಾತಿ ಒಪ್ಪಿಸಿ ಸಂಖ್ಯೆ ಪಡೆದುಕೊಳ್ಳುವದು ಕಡ್ಡಾಯವೆಂದರು.
ತಾಲೂಕಿನಲ್ಲಿ ಸುಮಾರು 500 ಕ್ಕೂ ಹೆಚ್ಚು ಆಟೋಗಳಿವೆ. ಎಲ್ಲರೂ ದಾಖಲಾತಿಗಳನ್ನು ಮಾಡಿಸಿಕೊಂಡು ಸಂಖ್ಯೆ ಪಡೆಯಬೇಕೆಂದರು. ಅಲ್ಲದೆ ಯಾವುದೇ ಗಲಾಟೆ, ಅಪಘಾತ ಅಥವಾ ಕಳ್ಳತನವಾದಲ್ಲಿ ತಕ್ಷಣ 112 ನಂಬರಿಗೆ ಕಾಲ್ ಮಾಡಿ ತಕ್ಷಣ ಪೊಲೀಸರು ಹಾಜರಾಗಲಿದ್ದಾರೆ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರಿಗೆ ಕೋವಿಡ್ ನಿಯಮಾವಳಿಯನ್ನು ಪಾಲಿಸುವಂತೆ ಕರೆ ನೀಡಿದರು. ಮತ್ತು ಸ್ಯಾನಿಟೈಸರ್ ವಿತರಿಸಿದರು. ನಗರ ಠಾಣೆ ಪಿಐ ಚನ್ನಯ್ಯ ಹಿರೇಮಠ, ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ಅಲ್ಲಾಪುರೆ ಮತ್ತು ಪಿಎಸ್‍ಐ ಹಣಮಂತ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಆಟೋ ಚಾಲಕರು ಭಾಗವಹಿಸಿದ್ದರು.
ಹಣ್ಣಿನ ಸಸಿಗಳನ್ನು ಚಾಲಕರಿಗೆ ವಿತರಿಸಿದ ಎಸ್‍ಪಿ
ಪ್ರಸ್ತುತ ಕಾಲದಲ್ಲಿ ಪಶು ಪಕ್ಷಿಗಳಿಗೆ ಆಹಾರವಿಲ್ಲದ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲರು ಕಮರ್ಷಿಯಲ್ ಬೆಳೆ ಬೆಳೆಯುವ ಧಾವಂತದಲ್ಲಿದ್ದಾರೆ. ಪಕ್ಷಿಗಳಿಗೆ ತಿನ್ನುಲು ಆಹಾರವಿಲ್ಲದಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಬೆಟ್ಟ ಗುಡ್ಡದಲ್ಲಿರುವ ಕೋಗಿ, ಪಕ್ಷಿಗಳು ಆಹಾರ ಅರಸಿ ನಾಡಿಗೆ ಬರುವಂತಾಗಿದೆ.
ಆ ಹಿನ್ನೆಲೆಯಲ್ಲಿ ಹಣ್ಣಿನ ಸಸಿಗಳನ್ನು ಎಲ್ಲರೂ ನೆಡಬೇಕಿದೆ ಎಂದು ಹಣ್ಣಿನ ಸಸಿಗಳನ್ನು ಚಾಲಕರಿಗೆ ಉಚಿತವಾಗಿ ವಿತರಿಸಿದರು. ಪ್ರತಿಯೊಬ್ಬರು ಮನೆ ಹಿತ್ತಲಲ್ಲಿ ಅಥವಾ ತಮ್ಮ ಜಮೀನುಗಳಲ್ಲಿ ಅಥವಾ ಸರ್ಕಾರಿ ಖಾಲಿ ಜಾಗಗಳಲ್ಲಿ ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಪಕ್ಷಿಗಳಿಗೆ ಆಹಾರ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಯಾದಗಿರಿಯ ತಮ್ಮ ಕಚೇರಿಯಲ್ಲಿ ಸುಮಾರು 20 ಸಾವಿರ ವಿವಿಧ ಹಣ್ಣಿನ ಸಸಿಗಳನ್ನು ಬೆಳೆಯಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 20 ಸಾವಿರ ಸಸಿಗಳನ್ನು ಸಿದ್ಧಪಡಿಸು ಮೂಲಕ ವಿತರಣೆ ಮಾಡಲಿದ್ದೇವೆ ಎಂದು ಎಸ್‍ಪಿ ವೇದಮೂರ್ತಿ ತಿಳಿಸಿದರು.