ಬೈಕ್ ಕಳ್ಳತನ ಇಬ್ಬರು ವಿದ್ಯಾರ್ಥಿಗಳ ಬಂಧನ
ವಿದ್ಯಾರ್ಥಿಗಳಿಂದ ಬೈಕ್ ಕಳ್ಳತನ, 12 ಬೈಕ್ ವಶ
yadgiri,ಶಹಾಪುರಃ ಕೊರೊನಾ ಮಹಾಮಾರಿ ಹಿನ್ನೆಲೆ ಶಾಲಾ ಕಾಲೇಜು ಬಂದ್ ಆಗಿದ್ದು, ಇಂತಹ ವಿಷಮ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಬೈಕ್ ಕಳ್ಳತನಕ್ಕೆ ಕೈ ಹಾಕಿದ್ದು, 12 ಬೈಕ್‍ಗಳು ಕಳುವು ಮಾಡಿ ಇದೀಗ ಪೊಲೀಸರ ಅತಿಥಿಯಾದ ಘಟನೆ ಶಹಾಪುರದಲ್ಲಿ ನಡೆದಿದೆ.
ಈ ಕುರಿತು ನಗರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಎಸ್ಪಿ ಡಾ.ವೇದಮೂತಿ ಮಾತನಾಡಿ, ಲಾಕ್‍ಡೌನ್ ವೇಳೆ ಮನೆಯಲ್ಲಿದ್ದು ಅಭ್ಯಾಸ ಮಾಡಬೇಕಾದ ವಿದ್ಯಾರ್ಥಿಗಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಮಯದಲ್ಲಿ ಸಾಕಷ್ಟು ಬೈಕ್‍ಗಳು ಕಳ್ಳತನ ಆಗುತ್ತಿರುವ ಕುರಿತು ಕಳ್ಳರ ಜಾಡು ಹಿಡಿಯಲು ಸೂಚಿಸಿದ್ದೆ,
ತಕ್ಷಣ ಕಾರ್ಯಪ್ರವೃತ್ತರಾದ ಆಯಾ ಪೊಲೀಸ್ ಅಧಿಕಾರಿಗಳು ಮೂರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ನಗರದ ಠಾಣಾ ವ್ಯಾಪ್ತಿಯ ಪೊಲೀಸರ ತಂಡ ಜುಲೈ 26 ರಂದು ರಾತ್ರಿ ಗಸ್ತಿನಲ್ಲಿರುವಾಗ, ನಗರದ ಗಂಜ್ ಏರಿಯಾದಲ್ಲಿ ಈ ವಿದ್ಯಾರ್ಥಿಗಳು ಸಂಶಯಾಸ್ಪದವಾಗಿ ತಿರುಗುತ್ತಿರುವದನ್ನು ಕಂಡು ಇರ್ವರನ್ನು ಠಾಣೆಗೆ ಎಳೆದು ತಂದು ವಿಚಾರಿಸಲಾಗಿ 12 ಬೈಕ್ ಕಳುವು ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ.
ತಕ್ಷಣ ಬೈಕ್ ಇರುವ ಸ್ಥಳ ಗುರುತಿಸಿ 12 ಬೈಕ್‍ಗಳನ್ನು ವಶಕ್ಕೆ ಪಡೆದು ಠಾಣೆಗೆ ತರಲಾಗಿದೆ. 5 ಲಕ್ಷ 45 ಸಾವಿರ ರೂ. ಮೌಲ್ಯದ ಬೈಕ್‍ಗಳಾಗಿದ್ದು, ಕಳ್ಳತನ ಮಾಡಿರುವ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದು, ಆರೋಪಿಗಳು ತಾಲೂಕಿನ ರಸ್ತಾಪುರ ಗ್ರಾಮದ ಸಂತೋಷ ಮತ್ತು ಶರಬಣ್ಣ ಎಂಬುವರಾಗಿದ್ದಾರೆ. 21 ವರ್ಷದವರಾದ ಈ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಶ್ಯಾಮಸುಂದರ ನೇತೃತ್ವದ ತಂಡ ಬೈಕ್ ಕಳ್ಳರ ಬಂಧನಕ್ಕಾಗಿ ಜಾಲ ಬೀಸಿದ್ದು, ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೈಕ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಮಾಲೀಕರು ತಮ್ಮ ಬೈಕ್ ಅಥವಾ ವಾಹನಗಳನ್ನು ನಿಲುಗಡೆ ಮಾಡುವಾಗ ಸೂಕ್ತ ಹ್ಯಾಂಡ್ ಲಾಕ್ ಮಾಡಬೇಕು. ಅಲ್ಲದೆ ವೀಲ್ ಚೈನ್ ಲಾಕ್ ಮಾಡಿಕೊಂಡು ಜಾಗೃತಿವಹಿಸಬೇಕು. ಅಲ್ಲದೆ ಬೆಲೆ ಬಾಳುವ ಯಾವುದೇ ವಸ್ತುಗಳು, ವಿವಿಧ ಡಾಕ್ಯುಂಮೆಂಟ್‍ಗಳು ಬೈಕ್ ನ ಬಾಕ್ಸ್ ಅಥವಾ ಮುಂಭಾಗದ ಪಾಕೆಟ್‍ನಲ್ಲಿ ಇಡಕೂಡದು.
-ಡಾ.ವೇದಮೂರ್ತಿ. ಎಸ್ಪಿ.ಯಾದಗಿರಿ.