ವೆಜ್ & ನಾನ್ ವೆಜ್ ಶಾಲೆ ರಚಿಸಬೇಕಾ.? ಉಪ್ಪಿನ್ ಬರಹ
ಮೊಟ್ಟೆಯ ಹೆಸರಲ್ಲಿ ಲಿಂಗಾಯತರ ದಾರಿ ತಪ್ಪಿಸಬೇಡಿ..!
-ಶಿವಕುಮಾರ್ ಉಪ್ಪಿನ,
ಪತ್ರಕರ್ತ, ಬರಹಗಾರ
ನಾನು ಚಿಕ್ಕವನಿದ್ದಾಗ ತೆಳ್ಳಗಿದೀನಿ ಅಂತ ಡಾಕ್ಟ್ರು ‘ಇವನಿಗೆ ತತ್ತಿ ಕೊಡ್ರಿ’ ಅಂದಿದ್ರು. ನಮ್ಮ ಕಾಕಾ ಆಗ ಸಂತೆಯಲ್ಲಿ ಸಿಗುತ್ತಿದ್ದ ಜವಾರಿ ತತ್ತಿ ತಂದು, ಹಾಲಲ್ಲಿ ಹಾಕಿ ಕುಡಿಸಲು ಮತ್ತು ಕುದಿಸಿ ತಿನ್ನಿಸಲು ಶುರು ಮಾಡಿದರು.
ಹಾಗೆ ನನಗೆ ತತ್ತಿ ಮೊದಲ ಬಾರಿಗೆ ಪರಿಚಯವಾಗಿ ಹತ್ತಿರವಾಯಿತು. ನಾವು ಮನೆಯಲ್ಲಿ ಹಲವರು ಈಗಲೂ ತತ್ತಿ ತಿಂತೀವಿ. ನಮ್ಮ ಮಕ್ಕಳಿಗೂ ತಂದು ಕೊಡ್ತೀನಿ. ನನ್ನಾಕೆ ಮಾತ್ರ ತಿನ್ನಲ್ಲ. ಮಾಂಸ ತಿನ್ನುವುದು ಬೇಡ ಅಂತ ಪ್ರಜ್ಞಾಪೂರ್ವಕವಾಗಿ ನಾವು ತಿನ್ನಲ್ಲ. ತಿನ್ನುವವರನ್ನೂ ನಿಕೃಷ್ಟವಾಗಿ ಕಾಣಲ್ಲ. ಹಾಗೆ ಕಾಣುವುದು ಶರಣರ ಧರ್ಮ ಅಲ್ಲವೇ ಅಲ್ಲ.
ಈಗ ತತ್ತಿ ಬೇಕು, ಕೊಡಿ ಎನ್ನುವವರನ್ನು ನೀವು ‘ಲಿಂಗಾಯತರಲ್ಲ’ ಅಂತ ಹೇಳುವ ಮನಸ್ಥಿತಿ ನೋಡಿದರೆ ಖೇದವಾಗುತ್ತೆ. ನಿಜಕ್ಕೂ ಇದು ‘ಲಿಂಗಾಯತ’ಕ್ಕೇ ಅಪಾಯಕಾರಿ. ಚರ್ಚೆ ಮಾಡಲಿ, ತಮ್ಮ ಅಭಿಪ್ರಾಯ ಹೇಳಲಿ. ಯಾಕೆ ಬೇಕು, ಬೇಡ ಅಂತ ವಿನಯದಿಂದ ತಿಳಿಸಲಿ.
ಆದರೆ, ಅಭಿಪ್ರಾಯ ಭೇದವಿದ್ದವರನ್ನು ಕೀಳಾಗಿ ಕಾಣುವುದು, ನೀವು ಲಿಂಗಾಯತರೇ ಅಲ್ಲ ಅನ್ನುವುದು ಯಾವ ಆಚಾರ? ಸದಾಚಾರದ ಹೆಸರಲ್ಲಿ ಸಸ್ಯಾಹಾರಿಗಳಿಗೇ ಬೇರೆ ಶಾಲೆ ಮಾಡಬೇಕಾ? ಇದೆಷ್ಟು ಸರಿ? ‘ನಾನ್ ವೆಜ್’ ಸ್ಕೂಲ್, ‘ವೆಜ್’ ಸ್ಕೂಲ್ ಅಂತ ಮಕ್ಕಳನ್ನು ವಿಭಜಿಸಿದರೆ ಮುಂದೆ ಅವರ ಗತಿ ಏನಾಗಲಿದೆ ಯೋಚಿಸಿ! ಸ್ವಾಮೀಜಿಗಳು ವಾಸ್ತವದ ಸೂಕ್ಷ್ಮ ಅರಿತು ನಡೆದರೆ ಚೆನ್ನ.
ಬಸವಣ್ಣನವರು ‘ಸದು ವಿನಯವೇ ಸದಾ ಶಿವನೊಲುಮೆ..’ ಎಂದು ಹೆಂಡದ ಜತೆ ಮಾಂಸ ತಿನ್ನುವವರನ್ನೂ ಅಪ್ಪಿಕೊಂಡು-ಒಪ್ಪಿಕೊಂಡು ಶರಣರನ್ನಾಗಿಸಿದರು. ಅವರ ಮತ್ತು ಉಳಿದ ಶರಣರ ಅನೇಕ ವಚನಗಳಲ್ಲಿ ಇದೆಲ್ಲ ನಾವು ಕಾಣಲ್ಲವೆ? ಕಂಡೂ ವಿತಂಡ ವಾದಕ್ಕೆ ಬಿದ್ದು, ನಮ್ಮದೇ ಸರಿ ಅಂತ ಉಳಿದೆಲ್ಲ ಲಿಂಗಾಯತರ ಹೆಸರಲ್ಲಿ ಹೆದರಿಸುವುದು ಸಾಧುವಲ್ಲ. ಇದಕ್ಕೆಲ್ಲ ಎಲ್ಲ ಲಿಂಗಾಯತರ ಬೆಂಬಲವೂ ಇಲ್ಲ.
ಇದು ಬಸವಾದಿ ಶರಣರ, ಮಾತೆ ಮಹಾದೇವಿಯವರ, ಲಿಂಗಾನಂದ ಶ್ರೀಗಳ ಆಶಯವಾಗಿರಲೂ ಇಲ್ಲ. ಅವರಿದ್ದಿದ್ದರೆ ಹೀಗೆ ಸರಿಯಾಗಿ ಯೋಚಿಸದೇ, ದಿನಕ್ಕೊಂದು ಏನೇನೊ ಹೇಳುತ್ತ ಯಾರೊಂದಿಗೋ ಸೇರಿ ವಿರೋಧಿಸುತ್ತ ‘ನೀವು ಲಿಂಗಾಯತ್ರಲ್ಲ’ ಅಂತಿರಲಿಲ್ಲ!
ಲಿಂಗಾಯತ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಈಗೆಲ್ಲ ಒಪ್ಪಲಾಗುತ್ತಿದೆ. ಇಂತಹ ಸಂದರ್ಭ ಆಹಾರದ ವಿಷಯದಲ್ಲಿ ಹೀಗೆ ಬಸವಣ್ಣನವರ ಹಾದಿಯನ್ನು ಸಂಕುಚಿತಗೊಳಿಸಿ, ಈ ಕಡೆ ವಾಲುವವರನ್ನೂ ಇರುಸು ಮುರುಸುಗೊಳಿಸಬೇಡಿ.
ಬಸವ ಧರ್ಮ ವಿಶಾಲವಾದದ್ದು, ಎಲ್ಲರನ್ನೂ ಒಪ್ಪಿಕೊಳ್ಳುವುದು, ಪ್ರೇಮದಿಂದ ಕಾಣುವುದೇ ಆಗಿದೆ. ಮಾಂಸ ತಿನ್ನುವವರನ್ನು ಪ್ರತ್ಯೇಕವಾಗಿಟ್ಟು, ದೇವಸ್ಥಾನಕ್ಕೂ ಬಿಡದ ಸಂದರ್ಭದಲ್ಲಿ ಅವರನ್ನು ಅಪ್ಪಿಕೊಂಡ ಬಸವಣ್ಣನವರು, ಅವರೂ ಮನುಷ್ಯರೇ ಎಂದು ಹೇಳುತ್ತ ‘ದಮನಿತರ ಮಗ ನಾನು’ ಅಂತ ಸಾರಿ ಸಾರಿ ಅವರಿಗೆ ಕಕ್ಕುಲಾತಿ ತೋರಿ ಶರಣರಾಗಿಸಿದ್ದರು.
ಈಗ ತತ್ತಿ ತಿನ್ನುವವರನ್ನು ಬೇರೆ ಕೂಡಿಸಿ ಅಂತ ಹೇಳುವುದು ಮತ್ತೊಂದು ಬಗೆಯ ಅಸ್ಪೃಶ್ಯತೆಯಲ್ಲವೇ? ಬಸವಣ್ಣ ಕೂಡಿಸಿದ್ದನ್ನು ನೀವು ಕಳೆಯುತ್ತೀರಾ? ಇದು ತಾವಷ್ಟೇ ‘ಪ್ಯೂರ್ ಲಿಂಗಾಯತ’ರೆಂದು ತಿಳಿದವರು ಮಾಡಬೇಕೆ? ಖಂಡಿತ ಇಲ್ಲ.
ದಯವಿಟ್ಟು ಮನವಿ ಮಾಡುವೆ,
ಬಿಟ್ಟು ಬಿಡಿ ಇದೆಲ್ಲ. ಸದ್ಯ ಸರಕಾರವೂ ಸುಮ್ಮನಾಗಿದೆ. ಮತ್ತೇಕೆ ಈ ಹೋರಾಟ, ಗೊಂದಲ ಎಲ್ಲ ಸರೀನಾ? ಕಾರಣ ನಿಜ ‘ಲಿಂಗಾಯತ’ವನ್ನು, ಬಸವಣ್ಣನವರನ್ನು ಅವರ ವಿಶ್ವ ಮಾನವ ವಿಚಾರಗಳನ್ನು ಕುಬ್ಜಗೊಳಿಸಬೇಡಿ.
ನೀವು ಭ್ರಮಿಸಿರುವ ‘ಲಿಂಗಾಯತ’ ಲಿಂಗಾಯತವೇ ಅಲ್ಲ. ಅದರ ಬೆಳಗು ಬೇರೆಯೇ ಇದೆ. ನನ್ನನ್ನೂ ನೀವು ಲಿಂಗಾಯತ ಅಲ್ಲ ಅಂದರೂ ಚಿಂತೆ ಇಲ್ಲ. ‘ಮಕ್ಕಳಿಗೆ ತತ್ತಿ ಬೇಕಿದ್ರೆ ಕೊಡಲಿ, ತಿನ್ನಬೇಕು ಅನ್ನಿಸಿದವರೂ ತಿನ್ನಲಿ’.
ಹಾಗಾಗಿ ಹೆಮ್ಮೆಯಿಂದ ಹೇಳುವೆ, ‘ಬಸವಾದಿ ಶರಣರ’ ಹಾದಿಯ ನಿಜವಾದ ಲಿಂಗಾಯತ!
ನಂ. 88809 59555