ತನಿಖಾ ಪತ್ರಿಕೋದ್ಯಮ ಕಾಲ ಮುಗಿಯಿತೆ.?
ಈಗ ‘ತನಿಖಾ ಪತ್ರಿಕೋದ್ಯಮ’ದ ಕಾಲವೇ ಮುಗೀತು ಅನ್ನಿಸುತ್ತಿದೆ – ಉಪ್ಪಿನ್
ನೇರ, ವಸ್ತುನಿಷ್ಠ ಸುದ್ದಿಗಳು ಟಿವಿ, ಪತ್ರಿಕೆಗಳಲ್ಲಿ ಕಾಣ್ತಿಲ್ಲ. ತಾನಾಗಿ ಸಿಗೋ ಮಾಹಿತಿಯನ್ನೇ ನಾವೀಗ Exclusive, Big breaking ಅಂತ ಸುಮ್ನೆ ನೋಡುತ್ತಿದ್ದೇವೆಯಷ್ಟೇ. ಇಷ್ಟೊಂದು ತಂತ್ರಜ್ಞಾನ, ಮಾಹಿತಿ ಕ್ರಾಂತಿ ನಡುವೆಯೂ ನೋಡುಗರು ಮತ್ತು ಓದುಗರು ಬಯಸುವ ‘ಸುದ್ದಿ ಹಿಂದಿನ ಸುದ್ದಿ’ಯ ಕುತೂಹಲವನ್ನ ಯಾರೂ ತಣಿಸುತ್ತಿಲ್ಲದಿರುವುದು ದುರ್ದೈವವೇ ಸರಿ.
ಏನೂ ಸೌಲಭ್ಯಗಳಿಲ್ಲದ ಬರೀ ಫ್ಯಾಕ್ಸ್, std ಫೋನ್ ಮಾತ್ರವಿದ್ದ ಕಾಲದಲ್ಲಿ ‘ಲಂಕೇಶ್ ಪತ್ರಿಕೆ’ ಮತ್ತು ಕೆಲ ದಿನ ಪತ್ರಿಕೆಗಳು ಎಷ್ಟೊಂದು ತನಿಖಾ ವರದಿಗಳು ಕೊಡುತ್ತಿದ್ದವು.
ಎನ್ನಲಾಗಿದೆ, ಕೇಳಲಾಗಿದೆ ಎನ್ನುವುದನ್ನು ಬಿಟ್ಟು ನೇರವಾಗಿ ಬರೆಯುವುದನ್ನು ಮತ್ತು ಭಂಡರನ್ನ ಝಾಡಿಸುವುದನ್ನು ಮೊದಲು ಕಲಿಸಿದ್ದೇ ಲಂಕೇಶ್. ಅವರನ್ನು ಆಗ ಅನುಸರಿಸಿ ‘ಹಾಯ್ ಬೆಂಗಳೂರ್’ ಸೇರಿ ನೂರಾರು ಟ್ಯಾಬ್ಲಾಯ್ಡ್ ಪತ್ರಿಕೆಗಳು ರಾಜ್ಯದಲ್ಲಿ ಹುಟ್ಟಿಕೊಂಡವು! ರವಿ ಬೆಳಗೆರೆ ಕೂಡ ಓದುಗರ ಹಸಿವು ನೀಗಿಸಿದರು.
ದುರಂತವೆಂದರೆ ಈಗ ಸಾಮಾಜಿಕ ಜಾಲತಾಣಗಳ ಜತೆಗೆ ಪತ್ರಿಕೋದ್ಯಮದವರು ಸೆಣೆಸುವ ಸ್ಥಿತಿ ಬಂದಿದ್ದು ಬೇಸರದ ಸಂಗತಿ! ಈ ಸಂದರ್ಭ ‘ರಾಸಲೀಲೆಗಳ ಮಾಫಿಯಾ’, ರಾಜಕಾರಣಿಗಳ ಹೇಸಿತನಗಳ ಬಗ್ಗೆಯೇ ತುಂಬ ಬರೆಯಬಹುದು, ತನಿಖೆ ಮಾಡಬಹುದು.
ಆದರೆ ಇದು ‘ಹೊಂದಾಣಿಕೆ ದುನಿಯಾ’ ಆಗಿದ್ದರಿಂದ, ಪತ್ರಕರ್ತರಲ್ಲಿ ಪ್ರಾಮಾಣಿಕತೆ-ಗಟ್ಟಿತನ ಮರೆಯಾಗಿರುವುದರಿಂದ ನಾವೆಲ್ಲ ಬರೀ ‘ಎನ್ನಲಾಗಿದೆ’, ‘ಹೇಳಲಾಗಿದೆ’ ಎನ್ನುವ ಸಪ್ಪೆ ಸುದ್ದಿಗಳಿಗಷ್ಟೇ ಸೀಮಿತವಾಗಿದ್ದೇವೆ.
ಇದೊಂದೆಡೆಯಾದರೆ; ಬರೆಯಬೇಕು-ಹೊರಗೆಡವಬೇಕು ಎನ್ನುವ ಹಲವು ನಿಜ ಪತ್ರಕರ್ತರಿಗೆ ಸ್ವಾತಂತ್ರ್ಯವಿಲ್ಲ. ತಾವೇ ಸ್ವತಃ ಏನಾದರೂ ಮಾಡಬೇಕೆಂದರೆ ಬಂಡವಾಳವಿಲ್ಲ. ಯಾರಿಂದಲೂ ಒಳ್ಳೆಯದನ್ನು ನಿರೀಕ್ಷಿಸದ, ಅಧಿಕಾರಸ್ಥರು ಲಜ್ಜೆಗೆಟ್ಟ ದುರ್ದಿನಗಳಿವು. ಗಾಂಧಿ, ಲೋಹಿಯಾ ಬಯಸಿದ ನಾಡೇ ಇದು? ಅಲ್ಲವೇ ಅಲ್ಲ. ಮುಂದೇನೊ ಗೊತ್ತಿಲ್ಲ. ಈಗಿನ ಪೀಳಿಗೆಯಲ್ಲಿ ಯಾವುದರಲ್ಲೂ ಭರವಸೆಯೇ ಇಲ್ಲ. ಎಲ್ಲ ಕೃತಕ, ಮುಗಿದು ಹೋದರೆ ಸಾಕೆನ್ನುವ ಬದುಕು ಅಷ್ಟೇ.
..
ಸುದ್ದಿ ಮನೆಯಲ್ಲಿ ಒಂದಷ್ಟು ವರ್ಷ ‘ಮಣ್ಣು ಹೊತ್ತಿರುವ’ ನನಗೆ ನೋವಿನ ದಿನಗಳಿವು. ಆದರೂ ನಾನು ನಂಬಿಕೆ ಮಾತ್ರ ಈ ಕ್ಷಣಕ್ಕೂ ಕಳೆದುಕೊಂಡಿಲ್ಲ. ಯಾಕೆಂದರೆ; ಮುಸುಕಾಗಿರಬೇಕು ಆದರೆ ಒಳ್ಳೆಯವರು ಎಲ್ಲೆಡೆ ಇನ್ನೂ ಬದುಕಿದ್ದಾರೆ ಎನ್ನುವ ಭರವಸೆ!