ಗಂಡನ ಕುಡಿತಕ್ಕೆ ಬೇಸತ್ತು ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಗಂಡನ ಕುಡಿತದ ಚಟಕ್ಕೆ ಹೆಂಡತಿ, ಮಕ್ಕಳು ಬಲಿ
ಕಲಬುರ್ಗಿಃ ಕುಡುಕ ಗಂಡನ ಕಿರುಕುಳ ತಾಳಲಾರದೆ ಮಹಿಳೆ ಓರ್ವಳು ತನ್ನ ಮೂರು ಮಕ್ಕಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಡಗಿಲ್ ಗ್ರಾಮದಲ್ಲಿ ನಡೆದಿದೆ.
ರವಿವಾರ ರಾತ್ರಿಯೇ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಜಯಶ್ರೀ (40), ಮಕ್ಕಳಾದ ಪವಿತ್ರ (12), ಸುನೀಲ್ (10), ಅನೀಲ್ (05) ಮೃತಪಟ್ಟ ದುರ್ದೈವಿಗಳು.
ಗಂಡ ಬಸವರಾಜನಿಗೆ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ. ಸಾಕಷ್ಟು ಬಾರಿ ಹೇಳಿದರೂ ಆತ ಸುಧರಿಸಲಿಲ್ಲ. ಹೀಗಾಗಿ ಬದುಕಿನ ಕಷ್ಟ ಕಾರ್ಪಣ್ಯಗಳಿಂದ ಬೇಸತ್ತಿದ್ದ ಆಕೆ, ಕುಡಿದು ಬಂದ ಗಂಡನ ಕಿರಿಕಿರಿ ತಾಳಲಾರದೆ ಮಕ್ಕಳೊಂದಿಗೆ ರವಿವಾರ ರಾತ್ರಿಯೇ ಸಾವಿಗೆ ಶರಣಾಗಿದ್ದಾಳೆ.
ಸೋಮವಾರ ಬೆಳಗ್ಗೆ ತಾಯಿ ಮಕ್ಕಳು ಕಾಣದಾದಾಗ ವಿಷಯ ತಿಳಿದಿದು ಬಂದಿದೆ. ಬಾವಿಯಲ್ಲಿ ತಾಯಿ ಜಯಶ್ರೀ ದೆಹ ಪತ್ತೆಯಾಗಿದ್ದು, ಮಕ್ಕಳ ಶವಕ್ಕಾಗಿ ಹುಡುಕಾಟ ನಡೆದಿದೆ. ನಗರದ ಅಗ್ನಿಶಾಮಕ ದಳ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದೆ.
ಗಂಡ ಬಸವರಾಜ, ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ತೀರ್ಥ ಗ್ರಾಮದ ನಿವಾಸಿ ಎನ್ನಲಾಗಿದೆ. ಆದರೆ ಹೆಂಡತಿ ಕಳೆದ ಒಂದು ತಿಂಗಳ ಹಿಂದೆ ತವರುಮನೆಯಾದ ಹಡಗಿಲ್ ಗ್ರಾಮಕ್ಕೆ ಬಂದಿದ್ದಳು. ತವರೂರಲ್ಲಿಯೇ ಈ ಘಟನೆ ನಡೆದಿದೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.