ಪ್ರಮುಖ ಸುದ್ದಿ

ಅಪಘಾತ ಮಾಡಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಹತ್ಯೆಗೆ ಯತ್ನ!?

ಕಲಬುರಗಿ: ಮೇ 20 ರಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ದೇವಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಂಜೆ ಹೊತ್ತಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಆಳಂದದ ಬೆಳಮಗಿಯಿಂದ ಕಲಬುರಗಿಗೆ ಮರಳುತ್ತಿದ್ದಾಗ ಚಿಂಚನಸೂರ ಬಳಿ ಇನೋವಾ ಕಾರ್ ಸೇತುವೆಗೆ ಡಿಕ್ಕಿಯಾಗಿತ್ತು. ಪರಿಣಾಮ ಅಪಘಾತದಲ್ಲಿ ರೇವುನಾಯಕ ಬೆಳಮಗಿ ಕಾಲು ಮತ್ತು ಎದೆಗೆ ತೀವ್ರ ಗಾಯವಾಗಿತ್ತು. ತಕ್ಷಣಕ್ಕೆ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಆದರೆ, ಅಂದು ನಡೆದದ್ದು ಆಕಸ್ಮಿಕ ಅಪಘಾತ ಆಗಿರಲಿಲ್ಲ. ಬದಲಾಗಿ ರೇವುನಾಯಕ ಬೆಳಮಗಿ ಅವರ ಕಾರು ಚಾಲಕ ವಿನಯನನ್ನು ಬುಟ್ಟಿಗೆ ಹಾಕಿಕೊಂಡು ಕೆಲವರು ರೇವುನಾಯಕ ಅವರ ಹತ್ಯೆಗೆ ಸಂಚು ರೂಪಿಸಿದ್ದರಂತೆ. ಈ ಮಾತನ್ನು ಖುದ್ದು ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರೇ ಹೇಳಿದ್ದಾರೆ.

ಅಪಘಾತದ ಬಳಿಕ ಏಕಾಏಕಿ ಕಾರು ಸೇತುವೆಗೆ ಡಿಕ್ಕಿ ಆಗಿದ್ದರ ಬಗ್ಗೆ ಅನುಮಾನಗಳು ಮೂಡಿದ್ದವು. ಅನುಮಾನಕ್ಕೆ ಇಂಬು ನೀಡುವಂತೆ ನಮ್ಮ ಕಾರು ಚಾಲಕ ವಿನಯ ಅಪಘಾತದ ಬಳಿಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ನಮ್ಮ ಬಿಜೆಪಿಯ ಹೈಕಮಾಂಡ್ ಗೆ ತಿಳಿಸುತ್ತೇನೆ. ಅವರ ಸೂಚನೆಯಂತೆ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ರೇವುನಾಯಕ ಬೆಳಮಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾರು ಚಾಲಕ ವಿನಯ

ಬಿಜೆಪಿಯ ನಾಯಕರೊಬ್ಬರು ಈ ಸಂಚು ರೂಪಿಸಿದ್ದರಂತೆ. ಹೀಗಾಗಿ, ರೇವುನಾಯಕ ಅವರು ಪಕ್ಷದ ಮುಖಂಡರಿಗೆ ಈ ಬಗ್ಗೆ ದೂರು ನೀಡುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಆದರೆ, ಕೊಲೆಗೆ ಸಂಚು ರೂಪಿಸಿದ್ದವರು ಯಾರು. ಚಾಲಕ ವಿನಯ ಯಾರ ಜತೆ ಸೇರಿ ಈ ಕೃತ್ಯ ಎಸಗಿದ್ದ ಎಂಬುದರ ಬಗ್ಗೆ ರೇವುನಾಯಕ ಬೆಳಮಗಿ ಸ್ಪಷ್ಟವಾಗಿ ತಿಳಿಸಿಲ್ಲ. ಚುನಾವಣ ವರ್ಷದಲ್ಲೇ ಇಂಥ ಘಟನೆ ನಡೆದಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಪೊಲೀಸ್  ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆಯನ್ನು ಬಯಲುಪಡಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button