ಏನಿದು ವಿನೂತನ ಸ್ಮಾರ್ಟ್ ಗರ್ಲ್..? ಜೈನ್ ಶಾಲೆಯಲ್ಲಿ ನಡೆದ ಕಾರ್ಯಕ್ರಮ
ಸ್ಮಾರ್ಟ್ ಗರ್ಲ್ ಕಾರ್ಯಕ್ರಮ
ಯುವತಿಯರ ಸಶಕ್ತಿಕರಣ, ಸ್ವಜಾಗರಣೆ ಅಗತ್ಯ- ಸಂಗೀತಾ ಜೈನ್
ಯಾದಗಿರಿ, ಶಹಾಪುರಃ ಪ್ರಸ್ತುತ ಸಮಾಜ ಆಧುನಿಕತೆಯತ್ತ ವೇಗವಾಗಿ ದಾಪಗಾಲು ಹಾಕುತ್ತಿದ್ದು, ನಮ್ಮ ದೇಶದಲ್ಲಿ ನೆಂಟಸ್ಥನ ಮತ್ತು ಸಂಬಂಧಗಳಿಗೆ ಹೊಸ ಪರಿಭಾಷೆಗಳು ಹುಟ್ಟುತ್ತಿವೆ. ಇಂತಹ ಕಾಲದಲ್ಲಿ ಸಂಸ್ಕೃತಿ ಪ್ರಧಾನ ದೇಶವಾದ ಭಾರತದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ ಎಂದು ಸ್ಮಾರ್ಟ್ ಗರ್ಲ್ ತರಬೇತಿ ಕಾರ್ಯಕ್ರಮದ ತರಬೇತುದಾರಣಿ ಸಂಗೀತ ಜೈನ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶಾ ಮಗನ್ಲಾಲ ಚಮನಾಜೀ ಜೈನ್ ಸ್ಕೂಲ್ನಲ್ಲಿ ಭಾರತೀಯ ಜೈನ ಸಂಘಟನೆಯ(ಬಿಜೆಎಸ್)ಯಿಂದ ನಡೆದ ಸ್ಮಾರ್ಟ್ ಗರ್ಲ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
21ನೇ ಶತಮಾನಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಯುವತಿಯರು ವಿಭಿನ್ನ ಪ್ರಕಾರದ ಸವಾಲುಗಳನ್ನು ಎದರಿಸುವಂತಾಗಿದೆ. ಆದ್ದರಿಂದ ಸ್ಮಾರ್ಟ್ ಗರ್ಲ್ ತರಬೇತಿ ಕಾರ್ಯಕ್ರಮದ ಮೂಲಕ ಯುವತಿಯರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.
ಯುವತಿಯರಿಗೆ ಸಶಕ್ತಿಕರಣ, ಸ್ವಜಾಗರಣೆ, ಸಂವಾದ ಮತ್ತು ಸಂಬಂಧ, ಮಾಸಿಕ ಧರ್ಮ ಮತ್ತು ಆರೋಗ್ಯ ವೃದ್ಧಿ, ಆಯ್ಕೆ ಮತ್ತು ನಿರ್ಣಯ ಸೇರಿದಂತೆ ಸ್ವಶಕ್ತಿ ಮತ್ತು ಆತ್ಮರಕ್ಷಣೆ ಹಾಗೂ ಗೆಳೆತನ ವಿರುದ್ಧ ಪ್ರಲೋಭನೆ ಬಗ್ಗೆ ಸ್ಮಾರ್ಟ್ ಗರ್ಲ್ ತರಬೇತಿಯಲ್ಲಿ ವಿದ್ಯಾರ್ಥಿನಿಯರಿಗೆ ಅರ್ಥೈಸಲಾಗುತ್ತದೆ. ಅಲ್ಲದೆ ತರಬೇತಿಯು ಎರಡು ದಿನಗಳ ಕಾಲ ನಡೆಸಲಾಗುತ್ತಿದ್ದು, ಅಂತಿಮ ದಿನ ಪಾಲಕರ ಜತೆಯು ಸಂವಾದ ನಡೆಸುವ ಮೂಲಕ ಮಕ್ಕಳ ಕುರಿತು ಹತ್ತಾರು ವಿಚಾರಗಳನ್ನು ಚಂತನೆ ಮಾಡಲಾಗುತ್ತದೆ.
ಪಾಲಕರಿಗೂ ಕೆಲವೊಂದು ಮಹತ್ವದ ವಿಚಾರಗಳನ್ನು ಮಕ್ಕಳ ಬೆಳವಣಿಗೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಗುತ್ತದೆ. ಇದೊಂದು ಯುವತಿಯರನ್ನು ಸಂಪೂರ್ಣ ಸಬಲೀಕರಣ ಮಾಡುವ ಕಾರ್ಯಕ್ರಮವಾಗಿದ್ದು, ಇದರ ಸದುಪಯೋಗವನ್ನು ಪಡೆಯುವ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಪಾಲಕರಿಂದ ಅವರ ಮಕ್ಕಳಿಗೆ ಏನು ಇಷ್ಟವಿದೆ ಎಂಬುದನ್ನು ತಿಳಿಯಲಾಯಿತು, ಅದರಂತೆ ಮಕ್ಕಳಲ್ಲಿ ಆಕುರಿತು ಪ್ರಶ್ನಿಸಿ ಹೆತ್ತವರು ಮಕ್ಕಳ ನಡುವೆ ಯಾವ ರೀತಿ ಸಂಬಂಧವಿದೆ ಎಂಬುದನ್ನು ತರಬೇತಿಯಲ್ಲಿ ತಿಳಿದುಕೊಂಡು ಸಂಬಂಧ ಕುರಿತು ಬೋಧನೆ ಮಾಡಲಾಗುತ್ತದೆ. ಇಂದಿನ ದಿನಮಾನಗಳಲ್ಲಿ ಇದು ಅಗತ್ಯವಿದೆ.
ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸಬೇಕಿದೆ. ಹೆತ್ತವರ ಪ್ರೀತಿ ಮಮತೆ ಕರುಣೆ ಕಾಣದ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ತಜ್ಞರಿಂದ ಸಂಶೋಧನೆಯಿಂದ ತಿಳಿದು ಬಂದಿರುವ ಕಾರಣ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ. ತಂದೆ ತಾಯಿ ಮಕ್ಕಳ ಪ್ರೀತಿ ಬಲಗೊಳಿಸುವದಲ್ಲದೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸವನ್ನು ಶಾಶ್ವತವಾಗಿ ಉಳಿಸುವ ಕೆಲಸಕ್ಕೆ ಇದು ಮುನ್ನುಡಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಎಸ್ ಅಧ್ಯಕ್ಷ ದೀನೇಶ ಜೈನ್, ರಾಜೇಶ ಜೈನ್, ಅಜೀತ್ ಜೈನ್, ಆನಂದ ಜೈನ್ ಸೇರಿದಂತೆ ಜೈನ್ ಶಾಲೆಯ ಮುಖ್ಯಸ್ಥ ಮಾಂಗಿಲಾಲ್ ಜೈನ್ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಭಾವಿಕಾ ಎಸ್.ಲಾಡ್ ಅಧ್ಯಕ್ಷತೆವಹಿಸಿದ್ದರು. ವಿದ್ಯಾರ್ಥಿನಿಯರು ಮತ್ತು ಪಾಲಕರು ಭಾಗವಹಿಸಿದ್ದರು.