ಮಹಾತ್ಮ ಚರಬಸವೇಶ್ವರರ ಸಂಭ್ರಮದ ರಥೋತ್ಸವ
ರಥೋತ್ಸವ ಸಂಭ್ರಮಃ ಚರಬಸವೇಶ್ವರ ಮಹಾರಾಜಕೀ ಜೈ..
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಸಗರನಾಡಿನ ಆರಾಧ್ಯ ದೈವ ಶ್ರೀಚರಬಸವೇಶ್ವರರ 96 ನೇ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ ಗದ್ದುಗೆ ಸಂಸ್ಥಾನದ ಮೂಲ ದೇವಸ್ಥಾನದಿಂದ ನಾಗರ ಕೆರೆಯ ನಂದಿ ಕಟ್ಟೆವರೆಗೂ ಜರುಗಿದ ಸಂಭ್ರಮದ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಮುಂಚಿತವಾಗಿ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಡಿಯಾಲ ಮೂಲಮಠದ ಶ್ರೀಗಳು ಚಾಲನೆ ನೀಡಿದರು. ಈ ಸಂದರ್ಭ ಡಾ.ಶರಣು ಬಿ.ಗದ್ದುಗೆ ಅವರ ನೇತೃತ್ವದಲ್ಲಿ ರಥೋತ್ಸವ ಸುಲಲಿತವಾಗಿ ಜರುಗಲಿ. ಈ ವರ್ಷ ರೈತಾಪಿ ಜನರ ಕಣ್ಣೀರು ಒರೆಸು ತಂದೆ. ಅವರಿಗೆ ಹೊಟ್ಟೆ ತುಂಬ ಊಟ ಕಣ್ಮುಂಬ ನಿದ್ದೆ ಹರಸು, ರಾಜ್ಯ ದೇಶದಲ್ಲಿ ಶಾಂತಿ ಸಮಧಾನ ನೀಡು. ಕರ್ನಾಟಕ ಹಸಿರಾಗಿ ದೇಶಕ್ಕೆ ಹೆಸರಾಗುವಂತೆ ಮಾಡು. ಯಾವುದೇ ಗಲಭೆ, ದ್ವೇಷ ಭಾವನೆ ಬಿತ್ತದೆ ಸ್ನೇಹ ಜನಪರ ಸಹಕಾರ ಸಹಬಾಳ್ವೆ ನಡೆಸುವಂತೆ ಸಮಾನತೆಯ ಜ್ಞಾನ ಕಲ್ಪಿಸು ತಾತಾ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಭಕ್ತರ ಜಯಘೋಷ ಮಧ್ಯೆ ರಥೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ರಥದ ಮೇಲೆ ಎರಚುವ ಮೂಲಕ ಧನ್ಯತಾಭಾವ ಸಮರ್ಪಿಸಿ, ತಮ್ಮ ಇಷ್ಠಾರ್ಥ ಸಿದ್ಧಿಗೆ ನಿಂತಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.
ಚರಬಸವೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆಗಳು ಮೊಳಗಿದವು. ನಂತರ ರಥೋತ್ಸವವಕ್ಕೆ ಭಕ್ತಾಧಿಗಳು ಕಾಯಿ ಕರ್ಪೂರ ಅರ್ಪಿಸಿದರು. ರಥೋತ್ಸವ ಸುಲಲಿತವಾಗಿ ಜರುಗಿದರಿಂದ ರಥ ಎಳೆದ ಭಕ್ತಾಧಿಗಳಲ್ಲಿ ಮನದಲ್ಲಿ ಸಂತಸ ಕಂಡು ಬಂದಿತು.
ಇದೇ ವೇಳೆ ರೈತಾಪಿ ಜನರ ಸಂಕಷ್ಟ ಅಳಿದು ಪ್ರತಿ ರೈತರ ಕುಟುಂಬದ ಮನೆಯಲ್ಲಿ ಹರ್ಷದ ಹೊನಲು ಚಲ್ಲುವಂತಾಗಲಿ ಎಂದು ಉಪಸ್ಥಿತರಿದ್ದ ಶ್ರೀಮಠದ ಬಸವಯ್ಯ ಶರಣರು ಭಕ್ತಾಧಿಗಳಿಗೆ ಆಶೀರ್ವದಿಸಿದರು.
ನಂತರ ನಡೆದ ಸಿಡಿಮದ್ದುಗಳ ಭರಾಟೆ ನೋಡುಗರ ಕಣ್ಮನ ಸೆಳೆಯಿತು. ಈ ಸಂದರ್ಭದಲ್ಲಿ ಆಂದೋಲಾದ ಸಿದ್ಧಲಿಂಗ ಮಹಾ ಸ್ವಾಮೀಜಿ, ಶ್ರೀಮಠದ ಬಸವಯ್ಯ ಶರಣರು, ಡಾ.ಶರಣು ಗದ್ದುಗೆ ಇತರರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ಭಕ್ತಾಧಿಗಳು ಮೂಲ ಗದ್ದುಗೆಗೆ ನೈವೇದ್ಯ, ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು.