2019 ರಲ್ಲಿ ಪ್ರಧಾನ ಮಂತ್ರಿ ಹುದ್ದೆ ಖಾಲಿ ಇರುವುದಿಲ್ಲ – ಕೇಂದ್ರ ಸಚಿವ ನಖ್ವಿ
ದೆಹಲಿ: 2019ರಲ್ಲಿ ಪ್ರಧಾನಿ ಹುದ್ದೆ ಖಾಲಿ ಇರುವುದಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಮತ್ತು ಅಭಿವೃದ್ಧಿಯ ವಿಷಯದ ಆಧಾರದ ಮೇಲೆ ಬಿಜೆಪಿ ಚುನಾವಣೆ ಎದುರಿಸಲಿದ್ದು ಅಭಿವೃದ್ಧಿಗೆ ದೇಶದ ಜನ ಬೆಂಬಲಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯ ದೇಶದಲ್ಲಿ ಸುರಕ್ಷಿತವಾಗಿಲ್ಲ ಎಂಬ ಭಾವ ಸಮುದಾಯದಲ್ಲಿ ಹೆಚ್ಚಿದೆ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿದ ನಖ್ವಿ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ ಸುರಕ್ಷಿತವಾಗಿದೆ. ಮೋದಿ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕಾರ್ಯ ನಡೆಸಿದೆ. ಅಭಿವೃದ್ಧಿ ಕಾರ್ಯವನ್ನು ಅಲ್ಪಸಂಖ್ಯಾತ ಸಮುದಾಯದ ಬಡಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.
ಅಲ್ಪಸಂಖ್ಯಾತರಲ್ಲಿ ಭೀತಿ ಹಾಗೂ ಆತಂಕ ಮೂಡಿಸುವ ಮೂಲಕ ಕೆಲವು ರಾಜಕೀಯ ಶಕ್ತಿಗಳು ಅಭಿವೃದ್ಧಿ, ಶಾಂತಿ ಹಾಗೂ ಸಮೃದ್ಧಿಯ ಸ್ಥಿತಿಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ. ಅಲ್ಪಸಂಖ್ಯಾತರ ವಿಷಯ ಮುಂದಿಟ್ಟು ಸರಕಾರದ ಹೆಸರು ಕೆಡಿಸುವ ವಿಪಕ್ಷಗಳ ಪ್ರಯತ್ನ ಯಶಸ್ವಿಯಾಗದು ಎಂದು ಕೇಂದ್ರ ಸಚಿವ ನಖ್ವಿ ಹೇಳಿದ್ದಾರೆ.