ಪತ್ನಿಯ ಸಾವಿನ್ನಪ್ಪಿದ ಕೆಲವೇ ನಿಮಿಷಗಳಲ್ಲಿ ಅಸ್ಸಾಂ ಗೃಹ ಕಾರ್ಯದರ್ಶಿ ಚೇಟಿಯಾ ಆತ್ಮಹತ್ಯೆಗೆ ಶರಣು..!
ಗುವಾಹಟಿ:ಆಘಾತಕಾರಿ ಘಟನೆಯೊಂದರಲ್ಲಿ ಅಸ್ಸಾಂ ಸರ್ಕಾರದಲ್ಲಿ ಗೃಹ ಮತ್ತು ರಾಜಕೀಯ ಇಲಾಖೆಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಶಿಲಾದಿತ್ಯ ಚೇಟಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಪತ್ನಿಯ ಸಾವಿನ ಸುದ್ದಿ ತಿಳಿದ ಕೂಡಲೇ ಅವರು ಈ ಹೆಜ್ಜೆ ಇಟ್ಟಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ನಿಧನರಾದ ಕೆಲವೇ ಕ್ಷಣಗಳಲ್ಲಿ ಶಿಲಾದಿತ್ಯ ಚೇಟಿಯಾ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಚೇಟಿಯಾ ಅವರು ತನ್ನ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರು ರಾಜ್ಯದ ಗೃಹ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಟಿನ್ಸುಕಿಯಾ ಮತ್ತು ಸೋನಿತ್‌ಪುರ ಜಿಲ್ಲೆಗಳ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ‘ಐಸಿಯುನಲ್ಲಿದ್ದ ಪತ್ನಿಯ ಸಾವಿನ ಸುದ್ದಿ ಕೇಳಿದ ಚೇಟಿಯಾ ಅವರು ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಧಿಕಾರಿಯ ದುರಂತ ಸಾವಿನಿಂದ ಇಡೀ ಅಸ್ಸಾಂ ಪೊಲೀಸ್ ಕುಟುಂಬ ತೀವ್ರ ದುಃಖದಲ್ಲಿದೆ’ ಎಂದು ಡಿಜಿಪಿ ಜಿ.ಪಿ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.