ಕಥೆ

ಶತ್ರುಗಳಿಂದ ಶತ್ರುವನ್ನೇ ಗೆದ್ದ ಇಲಿ..!

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ಶತ್ರುಗಳಿಂದ ಶತ್ರುವನ್ನೇ ಗೆದ್ದ ಇಲಿ

ಅದೊಂದು ಚಿಕ್ಕ ಕಾಡು. ಅಲ್ಲೊಂದು ದೊಡ್ಡದಾದ ಆಲದ ಮರ. ಸುತ್ತಲೂ ಬೆಳೆದು ನಿಂತ ಗಿಡ ಮರಗಳು. ಆ ಕಾಡಿನಲ್ಲಿ ಚಿಗರೆ, ಮೊಲ, ಬೆಕ್ಕು, ಇಲಿ, ಮುಂಗಲಿ, ಗರುಡ, ಗೂಗೆ, ನವಿಲು, ಪಾರಿವಾಳ ಮುಂತಾದ ಪಕ್ಷಿಗಳು ವಾಸವಾಗಿದ್ದವು. ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿಕೊಂಡು ನಿಂತ ಮರದಲ್ಲಿ ಎಲ್ಲ ಪಕ್ಷಿಗಳೂ ಗೂಡು ಕಟ್ಟಿಕೊಂಡು ತಮ್ಮ ಮರಿಗಳೊಂದಿಗೆ ಸಂತೋಷವಾಗಿದ್ದವು.

ಈ ಆಲದ ಮರದ ಸುತ್ತಲೂ ಅನೇಕ ಕಲ್ಲು ಬಂಡೆಗಳಿದ್ದವು. ಬಂಡೆಗಳ ಮಧ್ಯೆ ಅನೇಕ ಚಿಕ್ಕ ಚಿಕ್ಕ ಪ್ರಾಣಿಗಳು ಬಿಲ ಮಾಡಿಕೊಂಡು ವಾಸವಾಗಿದ್ದವು. ಅವುಗಳಲ್ಲಿ ಇಲಿಯೂ ಒಂದಾಗಿತ್ತು. ಅದು ತನ್ನ ಮರಿಯೊಂದಿಗೆ ಸುತ್ತ ಮುತ್ತ ದೊರೆಯಬಹುದಾದ ಹುಳು-ಹುಪ್ಪಡಿ, ಹಣ್ಣು, ಬೀಜಗಳನ್ನು ಹೆಕ್ಕಿ ತಿಂದು ಸುಖವಾಗಿತ್ತು. ಇದನ್ನು ಕಂಡ ಬೆಕ್ಕೊಂದು ಹೇಗಾದರೂ ಮಾಡಿ ಈ ಇಲಿಯನ್ನು ಹಿಡಿದು ತಿನ್ನಬೇಕು ಎಂದು ಯೋಚಿಸುತ್ತ ದಿನಾ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೇ ಇತ್ತು.

ಇಲಿ ಬೆಕ್ಕಿನ ಹೊಂಚಿನ್ನು ಅರಿತು ತನ್ನ ಚಾಣಾಕ್ಷತನದಿಂದ ಬಿಲದೊಳಗೆ ಸೇರಿ ಬಿಡುತ್ತಿತ್ತು, ಹೀಗೆ ಸುಮಾರು ದಿನಗಳು ಕಳೆದವು.

ಒಂದು ದಿನ ಬೇಟೆಗಾರ ಆಲದ ಮರದ ಹತ್ತಿರ ತನ್ನ ಬಲೆಯನ್ನು ಬೀಸಿ ಹೋದ. ಅದನ್ನರಿಯದೇ ಚಿಗರೆಯೊಂದು ಅದರಲ್ಲಿ ಸಿಕ್ಕು ಬೇಟೆಗಾರನಿಗೆ ಬಲಿಯಾಯಿತು. ಇಲಿ ತನ್ನ ಬಳಗದವರಿಗೆ ಇಲ್ಲಿ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಎಚ್ಚರದಿಂದಿರಬೇಕು ಎಂದು ಎಚ್ಚರಿಸಿತು. ಹೀಗೆ ಕೆಲವು ದಿನಗಳು ಉರುಳಿದವು.

ಕೆಲವು ದಿನಗಳ ನಂತರ ಬೇಟೆಗಾರ ಆದೇ ಆಲದ ಮರದ ಕೆಳಗೆ ಮತ್ತೆ ಬಲೆ ಬೀಸಿ ಹೊರಟು ಹೋದ, ಇದನ್ನು ಬಿಲದಿಂದಲೇ ನೋಡಿದ ಇಲಿ ಮತ್ತೆ ಬಿಲದೊಳಗೆ ಆಡಗಿಕೊಂಡಿತು.

ಬೆಳಕು ಹರಿಯುತ್ತಲೇ ಬಿಲದಿಂದಲೇ ಇಣುಕಿ ನೋಡಿತು. ಈ ಸಲ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಬೇರೆ ಯಾರೂ ಅಲ್ಲ, ಅದು ಬೆಕ್ಕಾಗಿತ್ತು. ಇಲಿಗೆ ಎಲ್ಲಿಲ್ಲದ ಆನಂದ, ತನ್ನನ್ನು ಹಿಡಿದು ತಿನ್ನುವ ಆಸೆಯಲ್ಲಿ ಬಂದು ಬಲೆಗೆ ಬಿದ್ದಿದೆ ಎಂದು ಅರಿತ ಇಲಿ ತನ್ನ ಬಳಗವನ್ನೆಲ್ಲ ಕರೆದು ಸಂತೋಷವನ್ನು ಹಂಚಿಕೊಂಡಿತು.

ಹೀಗೆ ಸಂತೋಷದಲ್ಲಿ ಕಲ್ಲು ಬಂಡೆಗಳ ಮೇಲೆ ಅತ್ತ ಇತ್ತ ಓಡಾಡುತ್ತಿರುವಾಗ ಆಲ್ಲೊಂದು ಮುಂಗಲಿ ಕಾಣಿಸಿಕೊಂಡಿತು, ಇದೇನು ಒಂದರ ಕಾಟ ತಪ್ಪಿತು ಎನ್ನುವಷ್ಟರಲ್ಲಿ ಇನ್ನೊಂದು ಬಂತಲ್ಲ, ಏನು ಮಾಡುವುದು? ಎಂದು ಯೋಚಿಸುತ್ತಿದ್ದಂತೆ ಆದಕ್ಕೊಂದು ವಿಚಾರ ಹೊಳೆಯಿತು.

ಇನ್ನು ಮುಂದೆ ಆಲದ ಮರದ ಮೇಲೆ ವಾಸ ಮಾಡಿದರಾಯಿತು ಎಂದು ಮರದ ಕಡೆ ನೋಡಿತು. ಅಲ್ಲಿ ಕುಳಿತ ಒಂದು ಗೂಗೆ ಇಲಿಯನ್ನೆ ಗುರಿಯಾಗಿಟ್ಟು ನೋಡುತ್ತಿತ್ತು. ಇದನ್ನು ಕಂಡ ಇಲಿ ಗಾಬರಿಯಾಯಿತು. ಕೆಳಗೆ ಮುಂಗಲಿ, ಮೇಲೆ ಗೂಗೆ ಏನು ಮಾಡಲಿ ದೇವರೆ? ಎಂದು ಚಡಪಡಿಸತೊಡಗಿತು.

ಇಲಿಗೆ ಒಂದು ವಿಚಾರ ಹೊಳೆಯಿತು, ಅದು ನೇರವಾಗಿ ಬಲೆಯಲ್ಲಿ ಸಿಕ್ಕುಬಿದ್ದ ಬೆಕ್ಕಿನ ಸನಿಹಕ್ಕೆ ಹೋಗಿ ವಿನಯದಿಂದ ಕೇಳಿಕೊಂಡಿತು, “ನೋಡು ಬೆಕ್ಕಪ್ಪ, ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಬಲ್ಲೆ. ಆದರೆ ಒಂದು ಷರತ್ತಿನ ಮೇಲೆ” ಎನ್ನುತ್ತಿದ್ದಂತೆ ಬೆಕ್ಕು “ಏನದು ಷರತ್ತು?’ ಎಂದಿತು.

“ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಿ ಬೇಟೆಗಾರನಿಂದ ಪಾರು ಮಾಡುತ್ತೇನೆ. ಇದರ ಬದಲಾಗಿ ನೀನು ನನ್ನನ್ನು ಈ ಮುಂಗಲಿ ಹಾಗೂ ಮರದ ಮೇಲಿರುವ ಗೂಬೆಯಿಂದ ರಕ್ಷಿಸುವುದಾಗಿ ಮಾತುಕೊಡು” ಎಂದಿತು.

ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ಬೆಕ್ಕಿಗೆ ಪ್ರಾಣ ಉಳಿಸಿಕೊಳ್ಳಲು ಇದು ಒಳ್ಳೆಯ ವಿಚಾರ ಎಂದೆನೆಸಿತು, “ಇಲಿರಾಯ, ನಾನು ನಿನ್ನ ಷರತ್ತಿಗೆ ಬದ್ಧನಾಗಿದ್ದೇನೆ” ಎಂದು ಮಾತು ಕೊಟ್ಟಿತು. “ನೀನು ಹೇಳಿದಂತೆ ನಡೆದುಕೊಳ್ಳುತ್ತೇನೆ, ನನ್ನನ್ನು ಪ್ರಾಣಾಪಾಯದಿಂದ ಪಾರು ಮಾಡು” ಎಂದು ಅಂಗಲಾಚಿತು.

ಇಲಿ ಅಂಜುತ್ತಲೇ ತನ್ನ ಹಲ್ಲುಗಳಿಂದ ಬಲೆಯನ್ನು ಕಡಿದು ಬೆಕ್ಕನ್ನು ಬಿಡಗಡೆಗೊಳಿಸಿತು. ಬೆಕ್ಕು ಇಲಿಯನ್ನು ಮುಂಗಲಿ ಹಾಗೂ ಗೂಗೆಯಿಂದ ರಕ್ಷಿಸಿತು. ಬೆಕ್ಕು ಮತ್ತು ಇಲಿ ಪರಸ್ಪರ ಆನಂದದಿಂದ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಬಳಗದ ಜೊತೆ ಸುಖವಾಗಿ ಬಾಳತೊಡಗಿದವು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button