ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಪ್ರಾಮಾಣಿಕತೆ ನಮ್ಮದಾಗಿರಲಿ
ವಿಮರ್ಶೆಗೆ ಗುಣ ಮುಖ್ಯವೋ? ವಯಸ್ಸು ಮುಖ್ಯವೋ.?

ವಿಮರ್ಶೆಗೆ ಗುಣ ಮುಖ್ಯವೋ? ವಯಸ್ಸು ಮುಖ್ಯವೋ?
ವಾಜಶ್ರವಸ್ಸು ಒಂದು ಯಾಗವನ್ನು ನಡೆಸಿದ. ವಿಶ್ವಜಿತ್ ಎಂಬುದು ಆ ಯಾಗದ ಹೆಸರು. ತನ್ನಲ್ಲಿರುವ ಸರ್ವಸ್ವವನ್ನೂ ಈ ಯಾಗದ ಸಂದರ್ಭದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ವಾಜಶ್ರವಸ್‌ನ ಮಗ ನಚಿಕೇತ.
ಯಾಗದಲ್ಲಿ ದಕ್ಷಿಣೆಯನ್ನು ಕೊಡುವ ಸಂದರ್ಭ. ತಂದೆ ಮಗನಿಗೆ ದಕ್ಷಿಣೆಯನ್ನು ತರಲು ಹೇಳಿದ. ಹಸುಗಳನ್ನೇ ದಕ್ಷಿಣೆಯಾಗಿ ಕೊಡಲು ವಾಜಶ್ರವಸ್ಸು ಮುಂದಾಗಿದ್ದ, ಆದರೆ ಆ ಹಸುಗಳು ಹೇಗಿದ್ದವು? ಮುದಿಯಾಗಿದ್ದ ಹಾಲನ್ನು ಕೊಡುವುದಿರಲಿ, ಅವಕ್ಕೆ ಹುಲ್ಲು ತಿನ್ನಲು, ನೀರು ಕುಡಿಯಲೂ ಶಕ್ತಿಯಿರಲಿಲ್ಲ. ಇಂಥ ಹಸುಗಳನ್ನು ದಕ್ಷಿಣೆಯನ್ನಾಗಿ ನಮ್ಮ ಅಪ್ಪ ಕೊಡುತ್ತಿದ್ದಾನೆ. ಕೊಡಬಾರದ ದಾನವನ್ನು ಕೊಟ್ಟರೆ ಒಳ್ಳೆಯದಾಗುವ ಬದಲು ಅನರ್ಥವೇ ಸಂಭವಿಸುತ್ತದೆ.
ಆನಂದಲೋಕಕ್ಕೆ ಬದಲಾಗಿ ಅನಂದಲೋಕ ದೊರಕುತ್ತದೆಯಲ್ಲ, ಎಂದು ಚಿಂತಿತನಾದನು. ನಚಿಕೇತ ಇನ್ನೂ ಪುಟ್ಟ ಹುಡುಗ. ಆದರೆ ಅವನು ಸರಿ-ತಪ್ಪುಗಳನ್ನು ವಿಮರ್ಶಿಸಬಲ್ಲವನಾಗಿದ್ದು ಮಾತ್ರವಲ್ಲ ಅವನು ತನ್ನ ತಂದೆಯ ತಪ್ಪನ್ನು ಅವನ ಗಮನಕ್ಕೂ ತಂದ.
ಹೀಗೆ ಮಾಡುವಾಗ ಅವನು ನಡೆದುಕೊಂಡ ರೀತಿಯೂ ಪ್ರಶಂಸಾರ್ಹ. ಅವನು ತನ್ನ ತಂದೆಯನ್ನು ಉದ್ದೇಶಿಸಿ ಒರಟಾಗಿ ವರ್ತಿಸಲಿಲ್ಲ. “ನೀನು ಮಾಡುತ್ತಿರುವುದು ಅಯೋಗ್ಯದ ಕೆಲಸ” ಎಂದು ಹೇಳಲಿಲ್ಲ. ಬಹಳ ನಾಜೂಕಾಗಿ, ಧ್ವನಿಪೂರ್ವಕವಾಗಿ ತನ್ನ ತಂದೆಯ ನಡೆವಳಿಕೆಯನ್ನು ವಿಮರ್ಶಿಸಿದ.
“ಯಾವ ಕೆಲಸಕ್ಕೂ ಬಾರದ ಹಸುಗಳನ್ನು ದಾನ ಮಾಡುತ್ತಿರುವೆ. ಹೀಗೆಯೇ ನಾನು ಸಹ ಯಾರ ಪ್ರಯೋಜನಕ್ಕೂ ಒದಗದವ ಎಳೆಯ ಹೀಗಾಗಿ ನನ್ನನ್ನು ನೀನು ಯಾರಿಗೆ ದಾನ ಮಾಡುವೆ ಅಪ್ಪ!’ ಎಂಬ ಸಂದೇಶವನ್ನು ನಚಿಕೇತ ತನ್ನ ತಂದೆಗೆ ಬಹಳ ಸಮರ್ಥವಾಗಿ ಮುಟ್ಟಿಸಿದ.
ಆದರೆ ಮಗನ ಶ್ರದ್ಧೆಯನ್ನು ಮೆಚ್ಚಿಕೊಳ್ಳುವಷ್ಟು ಔದಾರ್ಯವನ್ನು ತಂದೆ ತೋರಲಿಲ್ಲ ಮಗನ ಮೇಲೆ ಅವನು ಕೋಪಿಸಿಕೊಂಡು ನಿನ್ನನ್ನು ಯಮನಿಗೆ ದಾನ ಮಾಡಿದ್ದೇನೆ ಎಂದ.
ಕಠೋಪನಿಷತ್ತಿನ ಈ ಕಥಾಭಾಗ ಸಾಕಷ್ಟು ಮೌಲ್ಯಗಳನ್ನು ನಮಗೆ ತಿಳಿಸಿಕೊಡುತ್ತದೆ. ನಮ್ಮ ತಪ್ಪನ್ನು ಯಾರು ತಿಳಿಸಿಕೊಟ್ಟರೂ ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳುವಂಥ ಪ್ರಾಮಾಣಿಕತೆ ನಮ್ಮದಾಗಬೇಕು ಎಂಬುದು ಆ ಮೌಲ್ಯಗಳಲ್ಲಿ ಒಂದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.