ಕಡುಬಡತನದಲ್ಲಿ ಬೆಳೆದು, 8 ಬಾರಿ ಸರ್ಜರಿಗೆ ಒಳಗಾದಾಕೆ ಈಗ ಐಎಎಸ್ ಆಫೀಸರ್!
ರಾಜಸ್ಥಾನ: ಕೆಲವರು ಅದೆಷ್ಟೇ ಕಷ್ಟಗಳು ಎದುರಾದರೂ ಸಹ ತಮ್ಮ ಗುರಿಯ ಮೇಲಿರುವ ಅವರ ಗಮನ ಸ್ವಲ್ಪವೂ ವಿಚಲಿತಗೊಳ್ಳುವುದಿಲ್ಲ . ಇಲ್ಲೊಬ್ಬರು ವಿಕಲಚೇತನ ಯುವತಿ ಬಾಲ್ಯದಿಂದ ಎಷ್ಟೋ ಕಷ್ಟಗಳನ್ನು ಎದುರಿಸಿದ್ದರೂ ಸಹ ತಮ್ಮ ಗುರಿಯ ಮೇಲಿನ ಗಮನಕ್ಕೆ ತೊಂದರೆಯಾಗಲು ಬಿಡಲಿಲ್ಲ ನೋಡಿ. ಐಎಎಸ್ ಉಮ್ಮುಲ್ ಖೇರ್
ತಮ್ಮ ಬಾಲ್ಯದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ್ದರೂ ಸಹ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿಯನ್ನು ಸಾಧಿಸಿ ತೋರಿಸಿದವರು.
ರಾಜಸ್ಥಾನದ ಪಾಲಿಯ ನಿವಾಸಿಯಾದ ಉಮ್ಮುಲ್ ಖೇರ್ ಬಾಲ್ಯದಿಂದಲೂ ವಿಕಲಚೇತನರಾಗಿದ್ದರು. ಆದರೆ ದೃಢ ನಿರ್ಧಾರ ಹೊಂದಿದ್ದ ಮಹಿಳೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ.
ಉಮ್ಮುಲ್ ಖೇರ್ ರಾಜಸ್ಥಾನದ ಪಾಲಿಯಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ಮಾರ್ವಾರ್ ಕುಟುಂಬಕ್ಕೆ ಸೇರಿದವರು. ಅವರು ಮೂಳೆ ದುರ್ಬಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಲ್ಲಿ, ದೇಹದ ಮೂಳೆಗಳು ದುರ್ಬಲವಾಗುತ್ತವೆ. ಈ ಸಮಸ್ಯೆಯಿಂದಾಗಿ ಉಮ್ಮುಲ್ ನ ಮೂಳೆಗಳು ಆಗಾಗ್ಗೆ ಮುರಿಯುತ್ತಿದ್ದವು. ತಮ್ಮ ಜೀವನದಲ್ಲಿ 16 ಮುರಿತಗಳು ಮತ್ತು ಎಂಟು ಶಸ್ತ್ರಚಿಕಿತ್ಸೆಗಳನ್ನು ಅನುಭವಿಸಿದ್ದಾರೆ.
ಉಮ್ಮುಲ್ ಖೇರ್ ಅವರ ಕುಟುಂಬದ ಆರ್ಥಿಕ ಸ್ಥಿತಿ ತುಂಬಾ ಹೀನಾಯವಾಗಿತ್ತು. ಕುಟುಂಬವನ್ನು ಪೋಷಿಸಲು ಮತ್ತು ಅವರ ಶಾಲೆಯ ಶುಲ್ಕವನ್ನು ಪಾವತಿಸಲು, ಅವರು 7ನೇ ತರಗತಿಯಿಂದಲೇ ಚಿಕ್ಕ ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಶುರು ಮಾಡಿದರು. ಅವರು 9ನೇ ತರಗತಿಯಲ್ಲಿದ್ದಾಗ ಅವರ ತಾಯಿ ತೀರಿಕೊಂಡರು.
ಅವರ ತಾಯಿಯ ಮರಣದ ನಂತರ, ಅವರ ತಂದೆ ಮರು ಮದುವೆಯಾದರು. ಉಮ್ಮುಲ್ ಶಾಲೆಗೆ ಹೋಗುವುದು ಆಕೆಯ ಮಲತಾಯಿಗೆ ಇಷ್ಟವಿರಲಿಲ್ಲ. ಉಮ್ಮುಲ್ ತನ್ನ ಓದನ್ನು ಅರ್ಧಕ್ಕೆ ಬಿಡಲು ಇಷ್ಟವಾಗಲಿಲ್ಲ, ಆದ್ದರಿಂದ ಅವಳು ಮನೆಯನ್ನು ತೊರೆದು ಏಕಾಂಗಿಯಾಗಿ ವಾಸಿಸಲು ಪ್ರಾರಂಭಿಸಿ, ನಂತರ ಒಂದೊಂದೇ ಸಾಧನೆ ಮಾಡಿದ್ದಾರೆ.
ಅವರು ತನ್ನದೇ ಆದ ಮಾರ್ಗವನ್ನು ನಿರ್ಧರಿಸಿ, ಐಎಎಸ್ ಆಫೀಸರ್ ಆಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಜೆಆರ್‌ಎಫ್ ಸಮಯದಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು ಮತ್ತು ಸಿಎಸ್ಇ 2016 ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ 420ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.