ಶಹಾಪುರಃ ಮೋಟಾರ್ ಬೈಕ್ ಕಳ್ಳರಿಬ್ಬರ ಬಂಧನ
ಆರೋಪಿತರಿಂದ 4 ಬೈಕ್ ಮತ್ತು 12 ಮೊಬೈಲ್ ವಶಕ್ಕೆ
ಯಾದಗಿರಿ,ಶಹಾಪುರಃ ಕಳೆದ ಮೂರು ತಿಂಗಳುಗಳ ಹಿಂದೆ ಹುಣಸಗಿ, ಶಹಾಪುರ, ಸುರಪುರ ಪಟ್ಟಣಗಳಲ್ಲಿ ಕಳ್ಳತ್ತನ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಚಾಲಕಿ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಭಗವಾನ್ ಸೋನಾವಣೆ ಹಾಗೂ ಡಿಎಸ್ಪಿ ವೆಂಕಟೇಶ ಹುಗಿಬಂಡಿಯವರ ಸೂಕ್ತ ಮಾರ್ಗದರ್ಶನದಲ್ಲಿ ನಗರಠಾಣೆ ಪಿಐ ಹನುಮರಡ್ಡೆಪ್ಪನವರ ನೇತೃತ್ವದಲ್ಲಿ ಕ್ರೈಂ ಪಿಎಸ್‍ಐ ಪರಶುರಾಮ, ಮತ್ತು ಆಡಳಿತ ವಿಭಾಗದ ಚಂದ್ರಕಾಂತ ಮ್ಯಾಕಲ್, ಪಿಸಿಗಳಾದ ನಾರಾಯಣ, ಬಾಬು ನಾಯ್ಕಲ್, ಸತೀಶಕುಮಾರ ನರಸನಾಯಕ, ಶರಣಪ್ಪ, ಭಾಗಪ್ಪ, ಗೋಕುಲ್ ಹುಸೇನಿ, ಹುಸನಪ್ಪ ಗಸ್ತಿನಲ್ಲಿದ್ದಾಗ, ಹಳೇ ತಹಿಸೀಲ್ ಕಚೇರಿ ಹತ್ತಿರದಲ್ಲಿ ಅನುಮಾನಸ್ಪಾದವಾಗಿ ತಿರುಗುತ್ತಿದ್ದ ಇಬ್ಬರು ಯುವಕರನ್ನು ಕರೆ ತಂದು ವಿಚಾರಣೆ ನಡೆಸಿದಾಗ ಅವರಿಂದ ಹಲವು ಪಟ್ಟಣಗಳಲ್ಲಿ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರಾದ ಗಂಗಪ್ಪ ತಂದೆ ದುರ್ಗಪ್ಪ ಗೋರೆಬಾಳ [19] ಖಾಸಿಂ ತಂದೆ ಸಂಜೀವಪ್ಪ [19] ಸಾ. ಹುಣಸಗಿ ಇದ್ದು, ಇವರು ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಜನೇವರಿಯಲ್ಲಿ ಪಲ್ಸರ್ ಮೋಟಾರ್ ಬೈಕ್ ಮತ್ತು ಹಳೇ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಸೂಪರ್ ಸ್ಪ್ಲೆಂಡರ್, ಹುಣಸಗಿ ತಾಲೂಕಿನ ಕಲದೇವನಹಳ್ಳಿಯಲ್ಲಿ ಪಲ್ಸರ್ ಬೈಕ್ ಹಾಗೂ ವಜ್ಜಲ ಗ್ರಾಮದಲ್ಲಿ ಹಿರೋ ಹೋಂಡಾ ಕಳ್ಳತ್ತನ ಮಾಡಿರುವದಾಗಿ ತಿಳಿಸಿದ್ದಾರೆ. ಪ್ರಸ್ತುತ ಅವರಿಂದ ನಾಲ್ಕು ಬೈಕ್‍ಗಳು ಮತ್ತು 12 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 2 ಲಕ್ಷ 37 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರಿಬ್ಬರ ಮೇಲೆ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.