ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ
ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳ ತರಬೇತಿ ನೀಡಲು ಅರ್ಜಿ ಆಹ್ವಾನ
ಯಾದಗಿರಿ: 2021-22 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ 4 ವರ್ಷದ ತರಬೇತಿಯೊಂದಿಗೆ ಉಚಿತ ಊಟ, ವಸತಿ, ಶಿಕ್ಷಣ ಹಾಗೂ ಭತ್ಯೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀಡಲಾಗುತ್ತಿದ್ದು, ಇದಕ್ಕಾಗಿ ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಪ್ರವರ್ಗ-2ಎ ರಲ್ಲಿ ಬರುವ ಸವಿತಾ ಸಮಾಜ ಅಥವಾ ಅದರ ಉಪಜಾತಿಗಳಿಗೆ ಸೇರಿರುವ, ಆದಾಯ ಮಿತಿ-ರೂ.2 ಲಕ್ಷಗಳು ಮೀರಿರದ, ಕನಿಷ್ಠ 10 ವರ್ಷ ಹಾಗೂ ಗರಿಷ್ಠ 15 ವಯಸ್ಸಿನೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. (ಒಂದುವೇಳೆ ಅಧ್ಯಯನ ಮಾಡುತ್ತಿರುವ 15 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು ದೊರೆಯದ ಪಕ್ಷದಲ್ಲಿ ಮಾತ್ರ 18 ವರ್ಷದವರೆಗಿನಮಕ್ಕಳನ್ನು ಸ್ವಲ್ಪ ಮಟ್ಟಿಗೆ ಸೇರಿಸಲು ಅವಕಾಶ ನೀಡಲಾಗುವುದು.)
ಉಚಿತ ಊಟ ಮತ್ತು ವಸತಿ ವ್ಯವಸ್ಥೆ/ವಸತಿಯೇತರ ವಿದ್ಯಾರ್ಥಿಗಳಿಗೆ ಅವಕಾಶ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಟೌನ್ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ. ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಒದಗಿಸಲಾಗುವಂತೆ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಲೇಖನ ಸಾಮಾಗ್ರಿ, ಜಮಖಾನ, ಹೊದಿಕೆ ಕ್ಷೌರದ ವೆಚ್ಚವನ್ನು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು.
ಪ್ರತಿ ವಿದ್ಯಾರ್ಥಿಗೆ ಮಾಸಿಕ ತರಬೇತಿ ಭತ್ಯೆ ರೂ. 500 ರಂತೆ ನೀಡಲಾಗುವುದು. ಖಾಲಿ ಇರುವ 21 ನಾದಸ್ವರ ಹಾಗೂ 14 ಡೋಲು ತರಬೇತಿ ಸ್ಥಾನಗಳನ್ನು ತುಂಬಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಡೋಲು ಅಥವಾ ನಾದಸ್ವರ ಯಾವುದಾದರು ಒಂದು ತರಬೇತಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.
ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಅಕ್ಟೋಬರ್ 10ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ಸೈಟ್ http://bcwd.karnataka.gov.in ವೀಕ್ಷಿಸುವಂತೆ ಪ್ರಕಟಣೆ ತಿಳಿಸಿದೆ.