ಸಫಲವಾದಲ್ಲಿ ಇತರಡೆ ಸ್ಕಾಡಾ ತಂತ್ರಜ್ಞಾನ ಅಳವಡಿಕೆ-ಸಚಿವ ಶೇಖಾವತ್
ಕಾಲುವೆಗಳಿಗೆ ನೀರು ಹರಿಸಲು ತಂತ್ರಜ್ಞಾನ ಅಳವಡಿಕೆ

ಕಾಲುವೆಗೆ ನೀರು ಕಂಟ್ರೋಲ್ ರೂಂನಿಂದಲೇ ನಿರ್ವಹಣೆ
yadgiri, ಶಹಾಪುರಃ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಹಿನ್ನೆಲೆ ದೇಶದಲ್ಲಿ ಮೊದಲ ಬಾರಿಗೆ ಕೃಷ್ಣಾ ಕಾಡಾ ವ್ಯಾಪ್ತಿ ಸ್ಕಾಡಾ ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಸಫಲವಾದರೆ ದೇಶದ ಇತರಡೆ ಈ ತಂತ್ರಜ್ಞಾನ ಉಪಯೋಗಿಸಲಾಗುವದು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.
ನಗರ ಸಮೀಪದ ಭೀಮರಾಯನ ಗುಡಿ ಕೃಷ್ಣಾ ಕಾಡಾ ಕಚೇರಿ ಎದುರು ವಿನೂತನ ತಂತ್ರಜ್ಞಾನದ ಗೇಟ್ ಮತ್ತು ಮಷಿನ್ಗಳನ್ನು ವೀಕ್ಷಿಸಿ ಕೃಷ್ಣಾ ಕಾಡಾ ಕಟ್ಟಡದಲ್ಲಿ ರೂಪಿಸಿದ ಕಂಟ್ರೋಲ್ ರೂಂ ವೀಕ್ಷಿಸಿ ಸಂಬಂಧಿಸಿದ ಅಧಿಕಾರಿ ಮತ್ತು ಕಂಪನಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡು ಸುದ್ದಿಗಾರರಿಗೆ ತಿಳಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆಗಳಿಗೆ ನೂತನ ತಂತ್ರಜ್ಞಾನದ ಗೇಟ್ಗಳನ್ನು ಅಳವಡಿಸಿದ್ದು, ಈಗಾಗಲೇ ಶೇ.80 ರಷ್ಟು ಕಾಮಗಾರಿ ಮುಗಿದಿದ್ದು, ಇನ್ನೂ ಕೆಲವೇ ತಿಂಗಳಲ್ಲಿ ಸ್ಕಾಡಾ ತಂತ್ರಜ್ಞಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ಆಗ ಇದು ಪರಿಪೂರ್ಣ ಸಫಲತೆ ಹೊಂದಿದ್ದಲ್ಲಿ ಬೇರಡೆಯೂ ಇದನ್ನೆ ಉಪಯೋಗಿಸಲಾಗುತ್ತದೆ.
ಕೆಳಭಾಗದ ಜಮೀನುಗಳಿಗೆ ನೀರು ತಲುಪುವದಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಎಲ್ಲಾ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ಸ್ಕಾಡ ತಂತ್ರಜ್ಞಾನ ಅನುಕೂಲವಾಗಲಿದೆ ಎಂಬ ಆಶಯ ಹೊಂದಿದ್ದು, ಹುಣಸಗಿ ತಾಲೂಕಿನ ನಾರಾಯಣಪುರ ಡ್ಯಾಂ ಬಸವ ಸಾಗರ ಹಾಗೂ ಸನಿಹದ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯ ಕಂಟ್ರೋಲ್ ರೂಂನಲ್ಲಿ ಅಳವಡಿಸಲಾಗಿರುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ ತಂತ್ರಜ್ಞಾನವು ವೀಕ್ಷಿಸಿ ಬಂದಿದ್ದೇನೆ. ಎಲ್ಲಾ ರೀತಿಯಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನಗತ್ಯ ನೀರು ಪೋಲಾಗದಂತೆ ಮತ್ತು ಎಲ್ಲರಿಗೂ ಸಮಾನವಾಗಿ ನೀರು ತಲುಪಿಸುವಲ್ಲಿ ಈ ನೂತನ ತಂತ್ರಜ್ಞಾನ ಸಹಕರಿಸಲಿದೆ ಎಂದರು.
ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕೃಷ್ಣಾ ಕಾಡಾ ವ್ಯಾಪ್ತಿಯ ಕೆಳ ಭಾಗದ ಜಮೀನಿನ ರೈತರಿಗೆ ನೀರು ಹರಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ. ಈ ಹೊಸ ತಂತ್ರಜ್ಞಾನದ ಮೂಲಕ ಕೆಬಿಜೆಎನ್ಎಲ್ ಕಾಲುವೆಯ 365 ಗೇಟ್ಗಳನ್ನು ಕಂಟ್ರೋಲ್ ರೂಮ್ ಮುಖಾಂತರವೇ ನಿಯಂತ್ರಿಸುತ್ತಿದ್ದು, ನೀರು ಸಮ ಪ್ರಮಾಣದಲ್ಲಿ ಜಮೀನುಗಳಿಗೆ ಹರಿಸಬಹುದಾಗಿದೆ.
ಸುಮಾರು 1100 ಕೋಟಿ ವೆಚ್ಚದಲ್ಲಿ ಭಾರತ ಸರ್ಕಾರ ಕೃಷ್ಣಾ ಕಾಡಾ ಸಂಯೋಗದೊಂದಿಗೆ ಈ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.80 ರಷ್ಟು ಗೇಟ್ಗಳನ್ನು ಕೂಡಿಸುವ ಕಾರ್ಯ ನಡೆದಿದೆ. ಇನ್ನೂ ಕೆಲವೆ ದಿನಗಳಲ್ಲಿ ಪೂರ್ಣ ಪ್ರಮಾಣದ ಕೆಲಸ ಮುಗಿಸಿ, ನೀರು ಹರಿಸುವ ನಿರ್ವಹಣೆ ಹೊಸ ತಂತ್ರಜ್ಞಾನವನ್ನು ಕಂಪನಿಯವರೇ ಐದು ವರ್ಷ ನಿರ್ವಹಿಸಿ ಸುಸ್ಥಿತಿಯಲ್ಲಿ ನಮಗೆ ಒಪ್ಪಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮತ್ತು ಸ್ಕಾಡಾ ತಂತ್ರಜ್ಞಾನದ ಇಂಜಿನಿಯರ್ ಅಧಿಕಾರಿಗಳು ಇದ್ದರು.