ಜನಮನಪ್ರಮುಖ ಸುದ್ದಿ

ನನ್ನವಳ ಮೊದಲ ಫ್ರೀ ಬಸ್ ಪಯಣ ಮತ್ತು ಗ್ಯಾರಂಟಿಗಳ ಹಕೀಕತ್ತು!. ಪತ್ರಕರ್ತ ಉಪ್ಪಿನ್ ಪರಾಮರ್ಶೆ

ಪತ್ರಕರ್ತ ಉಪ್ಪಿನ್ "ಶಕ್ತಿ" ಯೋಜನೆ ಕುರಿತು ಬರಹ

ನನ್ನವಳ ಮೊದಲ ಫ್ರೀ ಬಸ್ ಪಯಣ ಮತ್ತು ಗ್ಯಾರಂಟಿಗಳ ಹಕೀಕತ್ತು!

Shivakumar uppin
ಇವತ್ತು ಬಿಜಾಪುರದಿಂದ ನಮ್ಮೂರ ಕಡೆ ಫ್ರೀಯಾಗಿ ಹೊರಟು ನೂರಾ ಅರವತ್ತು ರೂ. ಉಳಿಸಿಕೊಂಡಳು ನನ್ನಾಕೆ. ಅವಳು ಆರಾಮಾಗಿ ಬಸ್ಸೇರಿ ಕುಳಿತಳು. ನಮಗೆ ‘ಟಿಕೆಟ್ ತಗೋರಿ’ ಅಂದರು ಕಂಡಕ್ಟರ್.

ಟೀಕೆಗಳೇನೆ ಇರಲಿ, ಹೆಣ್ಣುಮಕ್ಕಳು ತುಸು ಖುಷಿಯಲ್ಲಿದ್ದಾರೆ. ಬಡಬಗ್ಗರಿಗಂತೂ ಅನುಕೂಲವಾಗಿದೆ. ಕಷ್ಟದ ಬ್ಯಾನಿ ಇರದ ಅನುಕೂಲಸ್ಥರು ಪುಕ್ಕಟೆ, ಬಿಟ್ಟಿ, ಜನ ಸೋಮಾರಿಗಳಾಗ್ತಾರೆ, ಸರಾಕಾರ ದಿವಾಳಿ ಆಗುತ್ತೆ ಅಂತೆಲ್ಲ ಏನೇನೊ ಮಾತಾಡಬಹುದು.

ಆದರೆ ವಾಸ್ತವ ಹಾಗಿಲ್ಲ. ಇವರು ಬೆಚ್ಚಗಿನ ಮನೆಯಲಿದ್ದು, ಹೊತ್ತೊತ್ತಿಗೆ ಉಂಡು ಹೀಗೆಲ್ಲ ದೇಶಾವರಿ ಮಾತನಾಡಬಹುದು. ಪುಕ್ಕಟೆ ಸಲಹೆ ಕೊಡುತ್ತಾರೆ. ಆದರೆ, ನೀವು ತ್ರಾಸಿದೆಯಂತ ಇವರಿಗೆ ದುಡ್ಡು ಕೇಳಿ ನೋಡಿ, ನಯಾಪೈಸೆ ಬಿಚ್ಚಲ್ಲ. ‘ಓಹ್ ನಿನ್ನೆಯೇ ಇಎಮ್‌ಐ ಕಟ್ಟೀನಲ್ರೀ..’ ಅಂತಾರೆ! ತಮ್ಮ ಪಾಲಕರನ್ನೇ ನೋಡದ ಇವರಿಗೆ ತಾವು-ತಮ್ಮೆರಡು ಮಕ್ಕಳೇ ಜಗತ್ತು.

ಸಾಲದ್ದಕ್ಕೆ ಇವರಿಗೆ ಭಾರಿ ದೇಶದ ಕಾಳಜಿ. ಮನಗಂಡ ಸರಕಾರಿ ಪಗಾರ ತಗೊಳ್ಳುವಾಗ ಬೇಡ ಬಿಡ್ರಿ ಬಜೆಟ್‌ಗೆ ಹೊರೆಯಾಗುತ್ತೆ ಅನ್ನಲ್ಲ. ನಿವೃತ್ತಿಯಾದ ಮೇಲೂ ಕಂಡಾಪಟ್ಟಿ ವೇತನ ಪಡೆವಾಗ ಸರಕಾರಕ್ಕೆ ಹೊರೆ ಅನಿಸಲ್ಲ.

ಬೇರೆ ಬೇರೆ ಸೌಲಭ್ಯ ಬಾಚುವಾಗ ದೇಶದ ದಿವಾಳಿತನದ ಚಿಂತಿ ಮಾಡಲ್ಲ. ಆದರೆ, ಬಡವರು ಒಂದು ಹೊತ್ತು ಉಣ್ಣಲು ಹಿಡಿ ಅಕ್ಕಿ ಪಡೆದರೆ, ಕಷ್ಟದಲ್ಲಿ ಮನೆ ನಿಭಾಯಿಸುವ ಹೆಣ್ಣುಮಕ್ಕಳು ತಿಂಗಳಿಗೆ ಕೇವಲ ಎರಡು ಸಾವಿರ ರೂಪಾಯಿ ತಗೋಂಡರೆ ಇಷ್ಟು ದಿನ ಮುಳುಗದ ಸರಕಾರ ಮುಳುಗೇ ಬಿಡುತ್ತೆ!

ಇಂತಹ ಮಾತು-ಉಡಾಫೆಗಳು ರಾಜಕಾರಣಿಗಳು ಸೃಷ್ಟಿಸಿದ ಅಪಸವ್ಯಗಳೇ ಆಗಿವೆ. ನಾವು ಅಧಿಕಾರಕ್ಕ ಬಂದರೆ ಅದು ಮಾಡುತ್ತೇವೆ, ನೀವು ಅಧಿಕಾರಕ್ಕೆ ಬಂದರೆ ಏನೂ ಮಾಡಿಲ್ಲ ಅಂತ ಇಬ್ಬರೂ ಜಗಳಾಡುತ್ತ ಸಮಗ್ರ ಅಭಿವೃದ್ಧಿ, ಜನರ ಸೌಖ್ಯ ಜೀವನ ರೂಪಿಸಿದವರೇ ಅಲ್ಲ. ಎಲ್ಲರನ್ನೂ ಸಮಾನರಾಗಿ ನೋಡಲೇ ಇಲ್ಲ.

ಉಳ್ಳವರು, ಇರದವರು ಹಂಗೇ ಉಳಿದರು. ಅದೆಲ್ಲ ಮಾಡದಿರುವುದಕ್ಕೇ ಈಗ ಅಕ್ಕಿ ಕೊಡೋದು, ರೊಕ್ಕಾ ಕೊಡೋದು, ಬಸ್ಸು-ಕರೇಂಟು ಫ್ರೀ ಅನ್ನೋ ಹಂತಕ್ಕೆ ಸರಕಾರ ಬಂದಿರೋದು. ಯಾವ ಯೋಜನೆಗಳೂ ಪೂರ್ತಿ ಸಾಮಾನ್ಯನಿಗೆ ತಲುಪಲ್ಲ, ಎಲ್ಲದರಲ್ಲೂ ಭ್ರಷ್ಟಾಚಾರ, ಶಿಕ್ಷಣವಂತೂ ಮಾರಿಕೊಳ್ಳಲಾಗುತ್ತಿದೆ, ಕುತ್ತಿಗೆಗೆ ಬಂದಿರುವ ಬೆಲೆ ಏರಿಕೆಯೇ ಎಲ್ಲದರ ಹದಗೆಡುವಿಕೆಯ ಮೂಲವಾಗಿದೆ. ಇದೆಲ್ಲ ರೋಗ ಸರಿಪಡಿಸಲಾಗದ ಫಲವಾಗಿಯೇ ಹೊತ್ತೊಂಟರೆ ಬದುಕಲು ಹೆಣಗುವ ಹೈರಾಣ ಸ್ಥಿತಿ ಜನರದ್ದಾಗಿದೆ.

ಅವರ ತ್ರಾಸು-ತಾಪತ್ರಯ ಅವರಿಗೇ ಗೊತ್ತು.
ಈಗ ಹೆಣ್ಣುಮಕ್ಕಳಿಗೆ ಸಿಗೋ ಎರಡು ಸಾವಿರದಲ್ಲಿ ಅವರು ತುಟ್ಟಿಯಾದ ಸಿಲಿಂಡರ್, ಕಿರಾಣಿ ಸಾಮಾನು ಮತ್ತೇನೊ ಕೊಳ್ಳಬಹುದೇನೊ. ಕರೆಂಟ್ ಬಿಲ್ಲಿಲ್ಲ. ಕೆಲಸವಿಲ್ಲದ ಹುಡುಗರು ವಿದ್ಯಾರ್ಥಿ ನಿಧಿಯಿಂದ ಮನೆಯಲ್ಲಿ ಕೈಯೊಡ್ಡೋದು ತಪ್ಪಬಹುದು. ನೌಕರಿಗೆ ಅರ್ಜಿ ಹಾಕಲು, ಖಾಸಗಿ ಲೈಬ್ರರಿಯಲ್ಲಿ ಕುಂತು ಓದಲು, ಚಹಾ-ಪಾಣಿಗೆ ಈ ಎರಡು-ಮೂರು ಸಾವಿರ ಉಪಯೋಗವಾಗುತ್ತೆ.

ಉದ್ಯಮಿಗಳ ಕೋಟಿಗಟ್ಟಲೆ ಸಾಲ ಮನ್ನಾ ಆದರೂ ಯಾರೂ ಕೇಳುವುದಿಲ್ಲ. ನಮ್ಮ ರೈತರ ಸಾಲ ಹಂಗೇ ಇರುತ್ತೆ. ಆದರೆ, ಬಡವರಿಗೆ ಸಿಗೋ ಸೌಲಭ್ಯ ಪ್ರಶ್ನಿಸಲಾಗುತ್ತೆ. ಹೀಗೆ ಆ ಕಡೆ-ಈ ಕಡೆ ತಲೆಗೊಬ್ಬೊಬ್ಬರು ಮಾತಾಡಲು ಬಿಟ್ಟಿದ್ದೇ ಅಲ್ಲಿಂದಿಲ್ಲಿನ ಹಾಳು ಅಧಿಕಾರಸ್ಥರು.

ರಾಜಕೀಯಕ್ಕೆ ಬಂದ ಹೊಸದರಲ್ಲಿ ಈ ರಾಜಕಾರಣಿಗಳ ಆಸ್ತಿ ಬೆರಳೆಣಿಕೆಯಷ್ಟಿರುತ್ತೆ. ಆಮೇಲಾಮೇಲೆ ಐನೂರು, ಸಾವಿರ ಕೋಟಿ ಘೋಷಣೆ ಮಾಡಿಕೊಳ್ಳುವಷ್ಟು ಬಲಿಯುತ್ತಾರೆ. ಇದನ್ನು ಯಾರೂ ಪ್ರಶ್ನಿಸಲ್ಲ. ಹತ್ತು ಕೇಜಿ ಅಕ್ಕಿ ಯಾಕೆ ಕೊಡ್ತೀರಿ, ಅವರು ದುಡಿಯಲ್ಲ ಅಂತ ಉಪದೇಶ ಮಾಡುತ್ತಾರೆ. ಹೀಗಿದೆ ನಮ್ಮ ಪಾಡು. ಎಲ್ಲಿಯತನಕ ರಾಜಕಾರಣಿಗಳು ಸಚ್ಚಾರಿತ್ರ್ಯವಂತರಾಗಲ್ಲ, ಹಾಗೆಯೇ ಮತ ಹಾಕುವವರು ಶ್ಯಾಣ್ಯಾರಾಗಿ ಸೆಟೆದು ನಿಲ್ಲಲ್ಲ, ಅಲ್ಲೀವರೆಗೂ ಇದು ಹಿಂಗೇ ಇರೋದು.

ವ್ಯವಸ್ಥೆ ಅನ್ನುವುದು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಒಬ್ಬರೊಂದು ಕಡೆ ಎಳೆದರೆ, ಮತ್ತೊಬ್ಬರು ಇನ್ನೊಂದು ಕಡೆ ಜಗ್ಗುತ್ತಾರೆ. ಕೊನೆಗೆ ನಿಯಂತ್ರಿಸಬೇಕಾದವರು ಅಧಿಕಾರದಲ್ಲಿರುವವರೇ. ಆದರೆ, ಅವರ ನಿಯಂತ್ರಣಕ್ಕೇ ಬರದಷ್ಟು ದೂರ ಅದನ್ನು ಅವರೇ ಸಾಗಿಸಿದ್ದಾರೆ. ಚುನಾವಣೆ, ಅಧಿಕಾರ ಕೇಂದ್ರಿತ ರಾಜಕಾರಣವೇ ಜೇಡರ ಬಲೆಯಂತೆ ಆವರಿಸಿ ಉಸಿರು ಗಟ್ಟಿಸಿದೆ. ಇದು ಬದಲಾಗಿ ಒಳ್ಳೆಯ ದಿನಗಳು ಬರುತ್ತವೆ ಅನ್ನೋದು ಮಲಗಿದ್ದಾಗ ಬೀಳುವ ಕನಸು ಅಷ್ಟೇ.

ಮೂಲತಃ ಮನುಷ್ಯನೇ ಭರಪೂರ ಹಾದಿ ಬಿಟ್ಟಿದ್ದಾನೆ. ಆತನಿಂದ ಎಲ್ಲ ಹಾಳೇ ಆಗುತ್ತಿದೆ. ಇಂತಹ ದೊಡ್ಡ ಭೂಮಿಯನ್ನೇ ಹದಗೆಡಿಸಿದ ಆತನಿಗೆ ಇದೆಲ್ಲ ಯಾವ ಲೆಕ್ಕ. ಇದು ಹಿಂಗೇ ಸಾಗೋದು.

-ಶಿವಕುಮಾರ್ ಉಪ್ಪಿನ, ಪತ್ರಕರ್ತ.

Related Articles

Leave a Reply

Your email address will not be published. Required fields are marked *

Back to top button