ಮಳೆ ಬೆನ್ನಲ್ಲೇ ಹೆಚ್ಚಿದ ಡೆಂಗ್ಯೂ ಭೀತಿ: ರಾಜ್ಯದಲ್ಲಿ 2,800 ಕ್ಕೂ ಹೆಚ್ಚು ಕೇಸ್ ಗಳು ಪತ್ತೆ!
ಬೆಂಗಳೂರು: ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ವರುಣರಾಯನ ಆಗಮನವಾಗಿದ್ದು, ಇದರ ಬೆನ್ನಲ್ಲೇ ಇದೀಗ ಡೆಂಗ್ಯೂ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಮೇ.13ರವರೆಗೆ ಒಟ್ಟು 2,877 ಪ್ರಕರಣಗಳು ವರದಿಯಾಗಿವೆ.
ಕಳೆದ ವರ್ಷ ಇದೇ ಅವಧಿಯಲ್ಲಿ 1,725 ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ನಿಯಂತ್ರಣ ಕ್ರಮಗಳ ತೀವ್ರಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಇಲಾಖೆಯು ಎನ್‌ಎಚ್‌ಎಂನ ಮಿಷನ್ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (ಡಿಎಚ್‌ಒ) ಮತ್ತು ರೋಗ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆಗಳು ನಡೆಸುವುದರ ಜೊತೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದಲ್ಲದೆ, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಮನೆ-ಮನೆಗೆ ಭೇಟಿ ನೀಡುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ದೃಢಪಟ್ಟ ಡೆಂಗ್ಯೂ ಪ್ರಕರಣಗಳ ಮೇಲ್ವಿಚಾರಣೆ, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ಪರೀಕ್ಷಾ ಕಿಟ್‌ಗಳು ಮತ್ತು ಚಿಕಿತ್ಸಾ ಔಷಧಿಗಳ ಲಭ್ಯತೆಯನ್ನು ಪರೀಶೀಲನೆ ನಡೆಸಲಾಗುತ್ತಿದೆ.