ದಿನಕ್ಕೊಂದು ಕಥೆ
ಹಿಂಸೆಯ ದುಷ್ಪರಿಣಾಮ
ಒಬ್ಬ ಬಾಲಕನಿದ್ದ. ಅವನ ಹೆಸರು ಮಾಂಡವ. ಅವನು ಸಂಸ್ಕಾರವಂತನಾಗಿದ್ದರೂ ಅವನಿಗೊಂದು ದುರಾಭ್ಯಾಸವಿತ್ತು. ಚಿಟ್ಟೆಗಳನ್ನು ಹಿಂಸಿಸುವುದು. ಎಂದರೆ ಅವನಿಗೆ ಅಪಾರ ಆಸಕ್ತಿ, ಅದರಲ್ಲಿ ಅವನು ಅತ್ಯಂತ ಆನಂದವನ್ನು ಪಡೆಯುತ್ತಿದ್ದನು.
ಬಣ್ಣ ಬಣ್ಣದ ಚಿಟ್ಟೆಗಳು ಹೂವಿನ ಮೇಲೆ ಕುಳಿತಾಗ ಸದ್ದಿಲ್ಲದೇ ಅದರ ಹತ್ತಿರ ಹೋಗಿ ಅವುಗಳನ್ನು ಮೆಲ್ಲನೇ ಹಿಡಿದು ಅದರ ಬಾಲಕ್ಕೆ, ದೇಹಕ್ಕೆ ದರ್ಬೆಯ ಕಡ್ಡಿಯಿಂದ ಚುಚ್ಚುತಿದ್ದನು. ಅದು ನೋವಿನಿಂದ ಚಟಪಡಿಸುತ್ತಿದ್ದರೆ, ಇವನು ಅತ್ಯಂತ ಆನಂದದಿದಂದ ಕೇಕೆ ಹಾಕಿ ಕುಣಿಯುತಿದ್ದ. ಪ್ರತಿ ಸಂದರ್ಭವನ್ನು ಅವನು ಇಂತಹದೇ ಸಂತೋಷಕ್ಕಾಗಿ ಕಾಯುತಿದ್ದ. ಮಾಂಡವ್ಯ ಬ್ರಾಹ್ಮಣ ಹುಡುಗ, ಸಂಪ್ರದಾಯದಂತೆ ಅವನನ್ನು ವೇದಾಭ್ಯಾಸ ಮಾಡಲು ಗುರುಕುಲಕ್ಕೆ ಬಿಟ್ಟರು.
ವೇದಾಭ್ಯಾಸದಲ್ಲಿಯೂ ತುಂಬಾ ಆಸಕ್ತಿಯನ್ನು ಹೊಂದಿದ್ದ. ಅವನು ಒಳ್ಳೆಯ ರೀತಿಯಲ್ಲಿ ಕಲಿಯತೊಡಗಿದನು. ಬೆಳೆದಂತೆಲ್ಲಾ ಅಭ್ಯಾಸ ಮುಗಿದಾದ ತಪಸ್ಸನ್ನು ಆಚರಿಸಲು ಶುರು ಮಾಡಿದ. ದೀರ್ಘವಾದ ತಪಸ್ಸನ್ನಾಚರಿಸಿ ದೊಡ್ಡ ಋಷಿಯಾಗಿ ಬೆಳೆದ. ಹಾಗೆಯೇ ಕಾಡಿನಲ್ಲಿ ತನ್ನದೇ ಆದ ಆಶ್ರಮವನ್ನು ಕಟ್ಟಿಕೊಂಡು ಅಲ್ಲಿಯೇ ಪೂಜೆ, ತಪಸ್ಸಿನಿಂದಾಗಿ ಇರತೊಡಗಿದನು.
ಅದೊಂದು ದಿನ ಮಾಂಡವನು ತಪಸ್ಸಿನಲ್ಲಿ ನಿರತನಾಗಿದ್ದನು, ಅವನು ಏಕಾಗ್ರತೆಯಿಂದ ದೇವರ ಧ್ಯಾನದಲ್ಲಿದ್ದಾಗ ಕಳ್ಳರು ಓಡುತ್ತಾ ಮಾಂಡವನ ಆಶ್ರಮದ ಕಡೆಗೆ ಬಂದರು. ಐದಾರು ರಾಜಭಟರು ಕಳ್ಳರನ್ನು ಬೆನ್ನು ಹತ್ತಿ ಓಡಿ ಬರುತಿದ್ದರು. ಹೆದರಿ ಓಡಿ ಬರುತಿದ್ದ ಕಳ್ಳರಿಗೆ ರಾಜ ಭಟರಿಂದ ತಪ್ಪಿಸಿಕೊಳ್ಳಲು ಹಾಗೆ ಯೋಗ್ಯವಾದ ಸ್ಥಳ ಬೇಕಾಗಿತ್ತು.
ಓಡಿ ಬರುತ್ತಿರುವಾಗ ಮಾಂಡವನ ಆಶ್ರಮ ಕಂಡ ಕೂಡಲೇ ಅವರಿಗೆ ಅದೊಂದು ರೀತಿಯಲ್ಲಿ ಜೀವನದ ಬಗ್ಗೆ ಆಸೆ ಮೂಡಿತು. ಎಲ್ಲರೂ ಆಶ್ರಮವನ್ನು ಪ್ರವೇಶಿಸಿದರು. ತಾವು ಕದ್ದು ತಂದ ನಗ ನಾಣ್ಯಾದಿಗಳನ್ನು ಅಲ್ಲಲ್ಲಿ ಅಡಗಿಸಿಟ್ಟು ತಾವೂ ಅಲ್ಲಿಯೇ ಅವಿತುಕೊಂಡರು. ಕಳ್ಳರನ್ನು ಹುಡುಕುತ್ತಾ ಆಶ್ರಮದ ಪ್ರವೇಶ ದ್ವಾರದಲ್ಲಿಯೇ ಧ್ಯಾನಾಸಕ್ತನಾಗಿ ಕುಳಿತಿದ್ದ ಮಾಂಡವನನ್ನು ಕಂಡು ಸಹಜವಾಗಿ “ಮುನಿಗಳೇ, ಕಳ್ಳರು ಯಾವ ಕಡೆ ಹೋದರೆಂಬುದೇನಾದರೂ ಬಲ್ಲಿರಾ?” ಎಂದು ಕೇಳಿದರು.
ಧ್ಯಾನದಲ್ಲಿದ್ದ ಮಾಂಡವ ಅವರ ಪ್ರಶ್ನೆಗೆ ಮಾತನಾಡಲಿಲ್ಲ. ರಾಜ ಭಟರು ಈ ಋಷಿಯೇ ಕಳ್ಳರ ಗುರು ಇರಬೇಕು. ಈ ರೀತಿ ವೇಷ ಬದಲಿಸಿಕೊಂಡು ಕುಳಿತಿರಬಹುದೆಂದು ನಿರ್ಧರಿಸಿ ಶಂಕಿತದಿಂದ ಆಶ್ರಮದ ಒಳ ಹೊಕ್ಕು ನೋಡಿದಾಗ ಅಲ್ಲಿ ಕಳ್ಳರು ಕದ್ದ ವಸ್ತುಗಳ ಸಮೇತ ಸಿಕ್ಕಿ ಬಿದ್ದರು. ಮಾಂಡವ್ಯ ಋಷಿ ಕಳ್ಳರ ಗುರು ಎಂದು ಅವರು ನಂಬುವದಕ್ಕೆ ಬಲವಾದ ಸಾಕ್ಷಿ ಸಿಕ್ಕಂತಾಯಿತು.
ರಾಜ ಭಟರು ಸಿಟ್ಟಿನಿಂದ ಕಳ್ಳರೊಂದಿಗೆ ಋಷಿಯ ಕೈ ಕಾಲು ಕಟ್ಟಿ ರಾಜನ ಬಳಿಗೆ ಎಳೆದು ತಂದರು. ರಾಜನ ಎದುರಿನಲ್ಲಿ ನಡೆದುದೆಲ್ಲವನ್ನೂ ತಿಳಿಸಿದರು. ರಾಜನು ಮಾಂಡವ್ಯನನ್ನು ವಿಧ ವಿಧವಾಗಿ ವಿಚಾರಿಸಿದನು. ಆದರೆ ತಾನು ಏನೊಂದೂ ಉತ್ತರಿಸಲಿಲ್ಲ. ಇದರಿಂದ ರಾಜನಿಗೆ ಅತೀವವಾದ ಕೋಪ ಬಂತು, ಉಳಿದ ಕಳ್ಳರೊಂದಿಗೆ ಋಷಿಯನ್ನು ಶೂಲಕ್ಕೆ ಏರಿಸುವಂತೆ ರಾಜಭಟರಿಗೆ ಆಜ್ಞೆಯನ್ನಿತ್ತನು.
ಅರಸನ ಆಜ್ಞೆಯಂತೆ ಸೇವಕರು ಕಳ್ಳರೊಂದಿಗೆ ಮುನಿಯನ್ನು ಗಲ್ಲಿಗೇರಿಸಿದರು. ಕೆಲವು ನಿಮಿಷಗಳಲ್ಲಿ ಎಲ್ಲರೂ ಸತ್ತು ಹೋದರು. ಆದರೆ ಮಾಂಡವ್ಯ ಮಾತ್ರ ಸಾಯಲಿಲ್ಲ. ಕೆಲವು ಗಂಟೆಗಳೇ ಬಿಟ್ಟು ನೋಡಿದರು. ಆಗಲೂ ಅವನು ಸಾಯಲಿಲ್ಲ. ಒಂದೆರಡು ದಿನಗಳನ್ನು ಬಿಟ್ಟು ನೋಡಿದರು. ಮಾಂಡವನ ಪ್ರಾಣ ಹೋಗಿರಲಿಲ್ಲ.
ಇದೊಂದು ಗಂಭೀರವಾದ ವಿಚಾರವಾಗಿ ಎಲ್ಲರೂ ಚರ್ಚಿಸಿದರು. ಇವರೊಬ್ಬ ದೈವ ಪುರುಷರಿರಬಹುದೆಂದು ರಾಜನು ಓಡಿ ಬಂದು ಕ್ಷಮೆ ಯಾಚಿಸಿ ಶೂಲವನ್ನು ತೆಗೆದು ಹಾಕಲು ಆದೇಶಿಸಿದರು. ಆದರೆ ಶೂಲವನ್ನು ತೆಗೆದು ಹಾಕಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಕತ್ತರಿಸಿ ತೆಗೆದರು. ಮೂಳೆಯಂತಹ ಚೂಪಾದ ಶೂಲದ ಮೊನೆ ಅವರ ದೇಹದಲ್ಲಿಯೇ ಉಳಿದುದರಿಂದ ಆತ ಆಣಿ ಮಾಂಡವನೆನಿಸಿಕೊಂಡನು.
ಒಂದು ದಿನ ಮಾಂಡವನು ದೇಹ ತ್ಯಾಗ ಮಾಡಿ ಯಮನ ಬಳಿ ಹೋದನು. ಯಮನನ್ನು ಕಂಡು “ಅಯ್ಯಾ ಯಮನೇ, ತಪಸ್ವಿಯಾದ ನಾನು ಏಕೆ ಶೂಲವೇರುವಂತಾಯಿತು” ಎಂದು ಕೇಳಿದನು. ಆಗ ಯಮನು. “ನೀನು ಸಣ್ಣವನಿರುವಾಗ ಚಿಟ್ಟೆಗಳ ಬಾಲಕ್ಕೆ ಕಡ್ಡಿಯಿಂದ ಚುಚ್ಚಿ ಹಿಂಸಿಸಿದ ಕಾರಣ ನೀನೂ ಹಿಂಸೆಯನ್ನು ಅನುಭವಿಸುವಂತಾಯಿತು” ಎಂದು ಯಮ ಹೇಳಿದ, ಹಿಂಸೆಯ ದುಷ್ಪರಿಣಾಮ ಮಾಂಡವನು ಅರ್ಥ ಮಾಡಿಕೊಂಡನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.