ಕಥೆ

ಎರಡು ಬೆಕ್ಕುಗಳ ನಡುವಿನ ಸಮಸ್ಯೆ ಪರಿಹರಿಸಿದ ಮಂಗ‌ ಹೇಗೆ ‌ಗೊತ್ತಾ.? ಇದನ್ನೋದಿ

ಮಂಗ ಕೊಟ್ಟ ತೀರ್ಪು

ಒಂದು ಹಳ್ಳಿಯಲ್ಲಿ ಎರಡು ಬೆಕ್ಕುಗಳು ಅನ್ಯೋನ್ಯವಾಗಿ ವಾಸಮಾಡಿಕೊಂಡಿದ್ದವು. ಒಂದನ್ನ ಬಿಟ್ಟು ಇನ್ನೊಂದು ಇರುತ್ತಿರಲಿಲ್ಲ. ಆಹಾರ ಸಿಕ್ಕಾಗ ಎರಡೂ ಬೆಕ್ಕುಗಳೂ ಒಟ್ಟಿಗೆ ಸೇರಿ ತಿನ್ನುತ್ತಿದ್ದವು. ಜಗಳ ಎಂದರೆ ಏನೆಂದೇ ಗೊತ್ತಿರಲಿಲ್ಲ. ಒಂದು ದಿನ ದೊಡ್ಡದೊಂದು ರೊಟ್ಟಿಯ ತುಂಡು ಯಾರದೋ ಮನೆಯ ಹಿತ್ತಲಲ್ಲಿ ಬಿದ್ದಿತ್ತು. ಈ ಬೆಕ್ಕುಗಳು ಅಲೆದಾಡುತ್ತಾ ಇದ್ದಾಗ ಆ ಹಿತ್ತಲಲ್ಲಿದ್ದ ರೊಟ್ಟಿಯ ತುಂಡನ್ನು ಏಕಕಾಲಕ್ಕೆ ಕಂಡವು. ತಕ್ಷಣವೇ ಎರಡೂ ಸೇರಿ ಆ ರೊಟ್ಟಿಯನ್ನ ಕಚ್ಚಿ ಹೊರಕ್ಕೆ ತಂದವು. ರೊಟ್ಟಿ ಅವುಗಳ ನಾಲಿಗೆಗೆ ತಾಕಿ ಬಹಳ ರುಚಿಕರ ಎನಿಸಿತ್ತು.

ತನಗೇ ಆ ರೊಟ್ಟಿ ಬೇಕು ಎಂದು ಎರಡೂ ಬೆಕ್ಕುಗಳು ಕಚ್ಚಾಡಲು ಆರಂಭಿಸಿದವು. ಹೀಗೆ ಕಚ್ಚಾಡುತ್ತಿದ್ದಾಗ ಅಲ್ಲಿಗೊಂದು ಮಂಗ ಬಂತು.

ಎರಡೂ ಬೆಕ್ಕುಗಳು ರೊಟ್ಟಿಗಾಗಿ ಕಚ್ಚಾಡುತ್ತಿದ್ದದ್ದು ಕಂಡು ಮನಸ್ಸಿನಲ್ಲೇ ಹೀಗೆ ಯೋಚಿಸಿತು, ” ಇಂಥ ಅವಕಾಶ ಎಲ್ಲಿ ಸಿಕ್ಕೀತು? ಅವರಿಗೆ ನ್ಯಾಯ ಒದಗಿಸುವ ನೆವದಲ್ಲಿ ನನ್ನ ಹೊಟ್ಟೆ ಭರ್ತಿ ಮಾಡಿಕೊಳ್ಳುತ್ತೇನೆ’ ಎಂದು ಬೆಕ್ಕುಗಳನ್ನು ಮಾತನಾಡಿಸಲು ಅವುಗಳ ಬಳಿಗೆ ಹೋಯಿತು.

“ನಿಮ್ಮ ಕಚ್ಚಾಟ ನೋಡಲಾರೆ, ಇಬ್ಬರಿಗೂ ಆ ರೊಟ್ಟಿ ಸೇರಬೇಕಾದ್ದೇ. ನಿಮಗೆ ನಾನು ನ್ಯಾಯ ಒದಗಿಸುತ್ತೇನೆ. ಆಗಬಹುದೋ?’ ಎಂದು ಕೇಳಿತು. ಬೆಕ್ಕುಗಳು ಆಗಬಹುದೆಂದು ತಲೆಯಾಡಿಸಿದವು.

ಮಂಗ ತುಂಡನ್ನ ತುಂಡುಮಾಡಿ ಎಡಗೈಗೆ ಒಂದು ತುಂಡು ಬಲಗೈಗೆ ಒಂದು ತುಂಡು ಹಾಕಿಕೊಂಡಿತು. ಎಡಗೈ ತುಂಡು ಜಾಸ್ತಿಯಾಯಿತೆಂದು ಸ್ವಲ್ಪ ಚೂರು ಮುರಿದು ಬಾಯಿಗೆ ಹಾಕಿಕೊಂಡಿತು. ಈಗ ಎಡಗೈ ತುಂಡಿಗಿಂಥ ಬಲಗೈಯದ್ದೇ ಜಾಸ್ತಿಯಾಯಿತೆಂದು ಅದರಿಂದ ಒಂದು ತುಂಡು ಬಾಯಿಗೆ ಎಸೆಯಿತು. ಹೀಗೆ ಮಾಡುತ್ತಲೇ ಹೋಯಿತು.

ಬೆಕ್ಕುಗಳು ಈ ದೃಶ್ಯವನ್ನು ಮಿಕಮಿಕ ನೋಡುತ್ತಾ ನಿಂತವು. ಕೊನೆಗೆ ಒಂದು ಸಣ್ಣ ರೊಟ್ಟಿಯ ಚೂರು ಮಾತ್ರ ಉಳಿಯಿತು. “ಈ ತುಂಡು ನನಗೆ ಸೇರಬೇಕು. ಏಕೆಂದರೆ ನಿಮ್ಮ ವ್ಯಾಜ್ಯವನ್ನು ಬಗೆಹರಿಸಿ ನಿಮಗೆ ನ್ಯಾಯ ಒದಗಿಸಿಕೊಟ್ಟಿದ್ದೇನೆ. ನಾನು ಬರುತ್ತೇನೆ, ಧನ್ಯವಾದ’ ಎಂದು ಹೇಳುತ್ತಾ ಉಳಿದೊಂದು ತುಂಡನ್ನೂ ಬಾಯಿಗೆಸೆದು ಓಡುತ್ತಾ ಹೋಯಿತು. ಎರಡೂ ಬೆಕ್ಕುಗಳು ನಿರಾಸೆಯಿಂದ ಪೆಚ್ಚಾಗಿ ನೋಡುತ್ತಾ ನಿಂತವು.

ನೀತಿ:- ಇಬ್ಬರ ಜಗಳ ಮೂರನೆಯವನಿಗೆ ಲಾಭ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button