ಬಿಸಿಯೂಟ ಸಿಬ್ಬಂದಿಃ ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ
yadgiri, ಶಹಾಪುರಃ ಅಕ್ಷರ ದಾಸೋಹ ಕಾರ್ಯಕ್ರಮದಡಿ ಸುಮಾರು 19 ವರ್ಷಗಳಿಂದ ಅತ್ಯಂತ ಕನಿಷ್ಠ ವೇತನದಲ್ಲಿ ದುಡಿಯುತ್ತಿರುವ ಈ ಬಡ ಮಹಿಳೆಯರನ್ನು 60 ವರ್ಷ ನೆಪವೊಡ್ಡಿ ಬಿಸಿ ಊಟ ನೌಕರರನ್ನು ತೆಗೆದು ಹಾಕಿದ ಸರಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಕೈಗೊಂಡ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಮುಷ್ಕರದಲ್ಲಿ ಭಾಗವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷೆ ಸುನಂದ ಹಿರೇಮಠ ಮಾತನಾಡಿ, ಗಾಯದ ಮೇಲೆ ಬರೆ ಎನ್ನುವಂತೆ ತೀವ್ರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ನೌಕರರ ಬದುಕು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಅಂಗವಿಕಲರು, ವಿಧವೆಯರು, ಪತಿಯಿಂದ ದೂರವಾಗಿರುವವರು, ವೃದ್ಧೆಯರು ಹೀಗೆ ಆರ್ಥಿಕ ಅಶಕ್ತರೇ ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.
ಅಕ್ಷರ ದಾಸೋಹ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ ಯಶಸ್ವಿಯಾಗಿದ್ದರೆ ಅದಕ್ಕೆ ಅಡುಗೆ ನೌಕರರ ಪರಿಶ್ರಮವೂ ಇದೆ. ಆದರೆ ಅವರನ್ನೇ ಶೋಷಿಸಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದ ಬಡ ಮಹಿಳೆಯರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಇದು ಖಂಡನಾರ್ಹವಾಗಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷೆ ಹನುಮಂತಿ ಮೌರ್ಯ ಮಾತನಾಡಿ, ಅಕ್ಷರ ದಾಸೋಹ ನೌಕರರು ಅಡುಗೆ ಜತೆಗೆ ಶಾಲೆಗೆ ಸಂಬಂಧಿಸಿದ ಬೇರೆ ಕೆಲಸವನ್ನೂ ಮಾಡಬೇಕು. ಕೆಲ ಶಾಲೆಗಳಲ್ಲಿ ಶಾಚಾಲಯ ಸ್ವಚ್ಛತೆ, ಶಾಲಾ ಕಾಂಪೌಂಡ್, ಆವರಣ ಸ್ವಚ್ಛತೆ ಕೆಲಸವನ್ನೂ ಮಾಡುತ್ತೇವೆ. ಜತೆಗೆ ಬೆಲ್ ಹೊಡೆಯುವುದು ಸೇರಿದಂತೆ ಕ್ಲರ್ಕ್ ಕೆಲಸವನ್ನೂ ನಿರ್ವಹಿಸುತ್ತೇವೆ. ಈ ಕೆಲಸಗಳೆಲ್ಲ ನಮಗೆ ಭಾರವಾಗುವುದಿಲ್ಲ. ಆದರೆ, ಕೆಲಸಕ್ಕೆ ತಕ್ಕಂತೆ ವೇತನ, ಕೆಲಸದ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಮಂಜುಳಾ ಹೊಸಮನಿ ಮಾತನಾಡಿ, ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ, ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು. ಶಾಲೆಗಳಲ್ಲಿ ಗ್ರೂಪ್ ಲ ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಕಾತಿ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಲಾಲಬೀ, ಶೇಖಮ್ಮ ರಾಜಪುರ, ಪಾರ್ವತಿ ಹಿರೇಮಠ, ಸುಲೋಚನಾ ಹಿರೇಮಠ್, ಅನ್ಪೂರ್ಣ ಶಿರವಾಳ, ಮಂಜುಳಾ, ಶರಣಮ್ಮ, ಯಮನಮ್ಮ, ಮಲ್ಲಮ್ಮ, ಕಾರ್ಮಿಕ ಮುಖಂಡ ಭೀಮರಾಯ ಬಾಣತಿಹಾಳ್ ಸೇರಿದಂತೆ ಇತರರಿದ್ದರು.