ಅಪಘಾತ, ಶಂಕಿತ ಕೊಲೆ, ಕಳ್ಳತನ ಪ್ರಕರಣಗಳ ಮುಚ್ಚಿ ಹಾಕುವ ಹುನ್ನಾರ – ಆನೇಗುಂದಿ ಆರೋಪ
ನೊಂದವರ ಪರ ನಿಲ್ಲದ ಪೊಲೀಸರು, ಗಂಭೀರ ಪ್ರಕರಣಗಳು ಕಾಣೆ - ಆರೋಪ
ನೊಂದವರ ಪರ ನಿಲ್ಲದ ಪೊಲೀಸರು, ಗಂಭೀರ ಪ್ರಕರಣಗಳು ಕಾಣೆ- ಆನೇಗುಂದಿ ಆರೋಪ
yadgiri, ಶಹಾಪುರಃ ಎಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೊ ಅಲ್ಲಿ ಶಾಂತಿ ವಾತಾವರಣ ವಿರುತ್ತದೆ. ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯವಾಗಿದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿಗಳೇ ಕರ್ತವ್ಯ ಲೋಪ ಎಸಗುತ್ತಿದ್ದು ರಾಜಕೀಯ ನಾಯಕರಿಗೆ ಮಣಿದು ತಾಲೂಕಿನ ಕೆಲವೊಂದು ಗಂಭೀರ ಪ್ರಕರಣಗಳನ್ನೆ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ರೈತ ಮುಖಂಡ ಚನ್ನಪ್ಪ ಆನೇಗುಂದಿ ಆರೋಪಿಸಿದರು.
ಶಹಾಪುರ ತಾಲೂಕಿನಲ್ಲಿ ಅಪಘಾತ, ಶಂಕಿತ ಕೊಲೆ, ಕಳ್ಳತನದಂತ ಪ್ರಕರಣಗಳು ಮುಚ್ಚಿ ಹೋಗಲು ಪೊಲೀಸರೇ ಕಾರಣರಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯದ ಎದುರು ಕರ್ನಾಟಕ ಪ್ರಾಂತ ರೈತ ಸಂಘದಿಂದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬೇಲಿಯೇ ಎದ್ದು ಹೊಲ ಮೇಯ್ದಂತ ಕೆಲಸ ಪೊಲೀಸರು ಮಾಡುತ್ತಿದ್ದು, ರಕ್ಷಕರೇ ಭಕ್ಷಕರಾಗಿದ್ದಾರೆ. ಈ ನಡೆ ಸರಿಯಲ್ಲ ಎಂದು ಗುಡುಗಿದ ಅವರು, ಏ.12 ರಂದು ತಾಲೂಕಿನ ಸಗರ ಗ್ರಾಮದ ಸೋಪಣ್ಣ ತಂದೆ ಮಲ್ಲಪ್ಪ ಹಿಂದಿನಮನೆ ಅಪಘಾತದಲಿ ಮೃತಪಟ್ಟಿದ್ದು, ಮಕ್ಕಳಿಬ್ಬರು ಗಂಭೀರಗಾಯಗೊಂಡಿದ್ದಾರೆ. ಸೂಕ್ತ ಚಿಕಿತ್ಸೆಗೆ ಆಸ್ಪತ್ರೆಯಲ್ಲಿದ್ದು, ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು. ಅಲ್ಲದೆ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಮಲ್ಲಣ್ಣನ ಕುಟುಂಬದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಅಲ್ಲದೆ ತಾಲೂಕಿನಲ್ಲಿ ಕಳ್ಳತನ, ಶಂಕಿತ ಕೊಲೆ ಪ್ರಕರಣಗಳು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲವಾಗಿದ್ದು ಅಲ್ಲದೆ, ಅವುಗಳನ್ನು ಮುಚ್ಚಿ ಹಾಕುವ ಯತ್ನದಲ್ಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ಇಲ್ಲಿ ಪ್ರಕರಣಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆಕೈಗೊಂಡು ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಅಲ್ಲದೆ ತಾಲೂಕಿನ ರೈತರ ಪಂಪ್‍ಸೇಟ್, ಸೋಲಾರ್, ಸೈಕಲ್ ಮೋಟರ್ ಕಳ್ಳತನ ವಾಗುತ್ತಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳದಿರುವದು ಸಂಶಯಕ್ಕೆ ಕಾರಣವಾಗಿದೆ. ತಾಲೂಕಿನ ಸೈದಾಪೂರ ಗ್ರಾಮದ ಬಸವರಾಜ ಪೂಜಾರಿ ಭಾನುಮತಿ ಮಾಡಿಸುತ್ತಿದ್ದು, ಮಹಿಳೆಯರನ್ನು ವಂಚಿಸುವುದು ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದು ಕೂಡಲೇ ಆತನನ್ನು ಬಂಧಿಸಬೇಕು.
ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ಮಟ್ಕಾ, ಜೂಜಾಟ ದಿಂದ ಜನತೆ ಜೀವನ ಕಳೆದು ಕೊಳ್ಳುತ್ತಿದ್ದಾರೆ. ಈ ಕೂಡಲೇ ಸಹಾಯವಾಣಿ ಒದಗಿಸಿ ಅಪರಾಧ ತಡೆಗಟ್ಟಬೇಕು ಎಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಸಂಚಾಲಕ ಜೈಲಾಲ್ ತೋಟದಮನಿ, ಶರಣಪ್ಪ ಜಾಕನಳ್ಳಿ, ಮಾರ್ಥಂಡಪ್ಪ ಹಿಂದಿನಮನಿ, ಈರಣ್ಣ ಹಿಂದಿನಮನಿ, ಮಡಿವಾಳಪ್ಪ ದೇಸಟ್ಟಿ, ಗುರುರಾಜ ಬೈಚಬಾಳ, ಮಲ್ಲಿಕಾರ್ಜುನ್ ಪಾಟೀಲ್ ಸೇರಿದಂತೆ ಮೃತ ಸೋಪಣ್ಣನ ಕುಟುಂಬಸ್ಥರು ಇದ್ದರು.