ಶಹಾಪುರಃ ಚರಬಸವೇಶ್ವರರ ಉಚ್ಛಾಯಿ ಉತ್ಸವ, ನಾಳೆ ಮಹಾ ರಥೋತ್ಸವ
ನಾಳೆ ಸಂಜೆ ಚರಬಸವೇಶ್ವರರ ಮಹಾ ರಥೋತ್ಸವ, ಜಾನುವಾರು ಜಾತ್ರೆ
ಚರಬಸವೇಶ್ವರರ ಉಚ್ಛಾಯಿ ಉತ್ಸವ, ಪುರಾಣ ಮಂಗಲ ಸಂಪನ್ನ, ನಾಳೆ ಮಹಾ ರಥೋತ್ಸವ
ಯಾದಗಿರಿ, ಶಹಾಪುರಃ ಸಗರನಾಡಿನ ಆರಾಧ್ಯ ದೈವ ಶ್ರೀ ಮಹಾತ್ಮ ಚರಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಮಂಗಳವಾರ ಸಂಜೆ ಚರಬಸವೇಶ್ವರರ ಉಚ್ಛಾಯಿ ರಥೋತ್ಸವ ನೂರಾರು ಭಕ್ತರ ಜಯಘೋಷದೊಂದಿಗೆ 6 ಗಂಟೆಗೆ ಜರುಗಿತು.
ಉಚ್ಛಾಯಿ ರಥದಲ್ಲಿ ಮಾರಡಗಿ ಶ್ರೀಗಳು ವಿಜೃಂಭಿಸಿದ್ದರು. ಚಬ ಸಂಸ್ಥಾನದ ಪೀಠಾಧಿಪತಿ ವೇ.ಮೂ.ಬಸಯ್ಯ ಶರಣರು, ಡಾ.ಶರಣು ಗದ್ದುಗೆ ನೇತೃತ್ವವಹಿಸಿದ್ದರು. ನೂರಾರು ಜನ ಭಕ್ತಾಧಿಗಳು ಭಾಗವಹಿಸಿದ್ದರು. ಭಾರಿ ಪ್ರಮಾಣದ ಜಾನುವಾರು ಜಾತ್ರೆಯು ನಡೆಯಲಿದ್ದು, ಈಗಾಗಲೇ ದೂರ ದೂರದಿಂದ ಜಾನುವಾರು ಮಾರಾಟಕ್ಕೆ ರೈತಾಪಿ ಜನರು ಆಗಮಿಸಿದ್ದಾರೆ. ಒಟ್ಟಾರೆ ಜಾತ್ರಾ ಮಹೋತ್ಸವ ಸಂಭ್ರಮದಲ್ಲಿ ಜನರು ಮುಳುಗಿದ್ದಾರೆ.
ನಾಳೆ ಮಹಾ ರಥೋತ್ಸವ
ಚರಬಸವೇಶ್ವರರ 100 ನೇ ಜಾತ್ರಾ ಮಹೋತ್ಸವ ಅಂಗವಾಗಿ ಈ ಬಾರಿ ಜರಗುವ ಮಹಾ ರಥೋತ್ಸವ ವಿಶೇಷವಾಗಿ ಭಕ್ತರು ಆಚರಿಸುತ್ತಿದ್ದು, ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಕೋವಿಡ್ ಮಹಾಮಾರಿ ಕಳೆದ ಎರಡು ವರ್ಷದಿಂದ ಜನರನ್ನು ಬೆಂಬಿಡದೆ ಕಾಡಿದ್ದು, ಈ ಬಾರಿ ಕೋವಿಡ್ ಮಹಾಮಾರಿ ತೀರಾ ಕಡಿಮೆಯಾಗಿದ್ದು, ಜಾತ್ರೆ, ಕಾರ್ಯಕ್ರಮ ನಡೆಸಲು ಸರ್ಕಾರ ನಿಯಮಗಳನ್ನು ಸಡಿಲಿಸಿರುವ ಕಾರಣ ಭಕ್ತರು ಉತ್ಸಾಹದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಬಾರಿ ವಿಶೇಷವೇನೆಂದರೆ ತಾತಾ ಚರಬಸವೇಶ್ವರರ ನೆಲೆನಿಂತು ಭಕ್ತರ ಇಷ್ಟಾರ್ಥ ಈಡೇರಿಸಿದಂಥ ಹಲವಾರು ಪವಾಡಗಳನ್ನು ತೋರಿದಂಥ ಯರವಾಳ, ಮಾರಡಗಿ, ಕೆಲ್ಲೂರ ಮತ್ತು ತಾತಾನವರು ಜನ್ಮಿಸಿದ ಗ್ರಾಮ ಅನವಾರ ಸೇರಿದಂತೆ ಈ ಗ್ರಾಮಗಳಿಂದ ವಿಶೇಷ ವಾಗಿ ಚರಬಸವೇಶ್ವರ ತಾತಾನವರ ಬೆತ್ತ (ಮಂತ್ರದಂಡ) ಹಿಡಿದು ಭಕ್ತಾಧಿಗಳು ನಾಳೆ ಬುಧವಾರ ಅಂದ್ರೆ ಏಪ್ರಿಲ್ 6 ರಂದು ಮದ್ಯಾಹ್ನ 3 ಗಂಟೆಗೆ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಲಿದ್ದು, ವೃತ್ತದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಮತ್ತು ನಗರದ ಭಕ್ತರು ಬೆತ್ತ ಹೊತ್ತು ಬಂದ ಭಕ್ತಾಧಿಗಳನ್ನು ಬರಮಾಡಿಕೊಂಡು ಅಲ್ಲಿಂದ ಶ್ರಿಮಠಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಆ ಬೆತ್ತಗಳನ್ನು ರಥೋತ್ಸವಕ್ಕೆ ಕಟ್ಟುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.
ಈ ಬಾರಿ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಜೊತೆಗೆ ಕುಸ್ತಿ ಸ್ಪರ್ಧೆ, ಧರ್ಮಸಭೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸರ್ವರೂ ಭಾಗವಹಿಸಿ ಚರಬಸವ ತಾತಾನ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಮಂಡಳಿ ತಿಳಿಸಿದೆ.