ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಕೊಲೆ ಶಂಕೆ
ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಕೊಲೆ ಶಂಕೆ
yadgiri, ಶಹಾಪುರಃ ದೇಹ ಸುಟ್ಟ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾದ ಘಟನೆ ತಾಲೂಕಿನ ಬೂದನೂರ ಗ್ರಾಮ ಸೀಮಾಂತರದಿ ಬರುವ ಕಾಲುವೆ ಬಳಿಯಲ್ಲಿ ದೊರೆತಿದೆ.
ಮೃತ ಯುವಕನನ್ನು ನಾಗಪ್ಪ ತಂದೆ ತಿಪ್ಪಣ್ಣ ಸಾ.ನಗನೂರ(32) ಎಂದು ಗುರುತಿಸಲಾಗಿದೆ. ಮೃತ ಯುವಕ ಕೃಷಿಕನಾಗಿದ್ದು, ಮೃತ ದೇಹದ ಕೆಲ ಭಾಗದಲ್ಲಿ ಬೆಂಕಿಯಿಂದ ಸುಟ್ಟಿರುವ ಗಾಯಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.
ವಿಷಯ ತಿಳಿದ ಗೋಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಪಿ.ವೇದಮೂರ್ತಿ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಹಲವು ಸೂಚನೆ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಐ ಶ್ರೀನಿವಾಸ ಅಲ್ಲಾಪುರೆ, ಗೋಗಿ ಠಾಣೆ ಪಿಎಸ್‍ಐ ಅಯ್ಯಪ್ಪ ಸೇರಿದಂತೆ ಪೊಲೀಸರು ಇದ್ದರು. ಶವದ ದೇಹಸ್ಥಿತಿ ನೋಡಿದರೆ ಯುವಕನ ಕೊಲೆ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತೀವ್ರ ತನಿಖೆಕೈಗೊಂಡಿದ್ದು, ಸತ್ಯಾಸತ್ಯತೆ ಶೀಘ್ರದಲ್ಲಿ ಹೊರಬರಲಿದೆ ಎಂದು ಪೊಲೀಸರು ತಿಳಿಸಿದರು.