ಗೋಗಿಃ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ, ಆರೋಪಿ ಅರೆಸ್ಟ್
ಕೊಲೆ ಆರೋಪಿಯೇ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ.!
yadgiri, ಶಹಾಪುರಃ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತಿದ್ದ ಆರೋಪಿ ತನ್ನ ಚಿಕ್ಕಪ್ಪನನ್ನೆ ಕೊಂದು ಯಾರಿಗೂ ಅನುಮಾನ ಬಾರದಿರಲಿ ಎಂದು ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದ ಎನ್ನಲಾದ ಆರೋಪಿ ಮಹ್ಮದ್ ಹನೀಫ್ ಚೌದ್ರಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಬಕ್ರೀದ್ ಹಬ್ಬದಂದು ಮುಸ್ಲಿಂ ಸಮುದಾಯದ ಮುಖಂಡ, ಮಸೀದಿಗಳ ಮೇಲುಸ್ತುವಾರಿ ಮಾಡುತ್ತಿದ್ದ ಖಾಸಿಂಸಾಬ್ ತಂದೆ ಚಂದಾಸಾಬ್ ಚೌದ್ರಿ [53] ಎಂಬಾತನನ್ನು ಆರೋಪಿ ಹನೀಫ್ ಲಾಂಗ್ (ಮಚ್) ನಿಂದ ತಲೆಗೆ ಹೊಡೆದು ಕೊಲೆಗೈದ ಘಟನೆ ನಡೆದಿತ್ತು.
ಆರೋಪಿ ಯಾರೆಂದು ತಿಳಿದಿರಲಿಲ್ಲ. ಕಳೆದ ಹದಿನೈದು ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವದು ಶ್ಲಾಘನೀಯವಾಗಿದೆ ಎಂದು ಎಸ್ಪಿ ಡಾ.ವೇದಮೂರ್ತಿ ತಿಳಿಸಿದರು. ಆರೋಪಿ ಬಂಧನಕ್ಕೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಘಟನೆ ನಡೆದ ಆ ಕ್ಷಣದಿಂದಲೇ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಲಾಗಿತ್ತು. ಸಮಯ ಕಳೆದಂತೆ ಆರೋಪಿಯನ್ನು ಪತ್ತೆ ಮಾಡಲಾಗಿ ಆತ ಇನ್ನೇನು ಬೇರಡೆ ತೆರಳಬೇಕೆಂದು ಯೋಚಿಸುವಷ್ಟರಲ್ಲಿ ಆತನ ಹಿಂದೆಯೇ ಫಾಲೋ ಮಾಡುತ್ತಿದ್ದ ಪೊಲೀಸರು ಆತನನ್ನ ಬಂಧಿಸಿದ್ದಾರೆ.
ಇದು ನಾಲ್ಕು ತಂಡಗಳು ಸೇರಿ ಎಣೆದ ಬಲೆಯಾಗಿದ್ದು, ಸಮರ್ಪಕ ಮಾಹಿತಿ ಪಡೆದುಕೊಂಡು ಆರೋಪಿ ಬಂಧಿಸಲಾಗಿದೆ. ಬಂಧಿತ ಆರೋಪಿ ಹನೀಫ್ ಹೇಳಿಕೆ ಪ್ರಕಾರ, ಸಂಬಂಧದಲ್ಲಿ ಚಿಕ್ಕಪ್ಪನಾಗುವ ಖಾಸಿಂಸಾಬ ಬಾನಾಮತಿ ಮಾಡಿಸುತ್ತಿದ್ದ, ಅಲ್ಲದೆ ಆರೋಪಿ ಅಣ್ಣನ ಮದುವೆಗೆ ಮುರಿದು ಬೀಳಲು ಈತನೇ ಕಾರಣನಾಗಿದ್ದು, ಈತನಿಂದ ತಮ್ಮ ಕುಟುಂಬ ಸಾಕಷ್ಟು ನೋವು ನಷ್ಟವನ್ನು ಅನುಭವಿಸಿದ್ದೇವೆ. ಆ ಒಂದು ಸಿಟ್ಟಿನಿಂದ ಹಬ್ಬದ ದಿನ ಬೆಳಗಿನ ಜಾವ ಆತ ಹೊರಗಡೆ ಬರುತ್ತಿದ್ದಂತೆ ಮೊದಲೇ ಕಾಯ್ದು ಕುಳಿತಿದ್ದು, ಆತನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದೇನೆ ಎಂದು ವಿವರಿಸಿದ್ದಾನೆ ಎಂದು ತಿಳಿಸಿದರು.
ಅಲ್ಲದೆ ಖಾಸಿಂಸಾಬನನ್ನು ಕೊಂದು ಯಾರಿಗೂ ಅನುಮಾನ ಬಾರದಿರಲಿ ಎಂದು ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಹಬ್ಬದ ದಿನದಂತೆ ಕೊಲೆಗೈದು ಕಲುಷಿತ ವಾತಾವರಣ ನಿರ್ಮಾಣ ಮಾಡಬೇಕೆಂಬ ಉದ್ದೇಶ ಆರೋಪಿಯದ್ದಾಗಿತ್ತು. ಆ ಹಿನ್ನೆಲೆಯಲ್ಲಿ ತಾನೇ ಕೊಲೆಗೈದು ಅಂತ್ಯಕ್ರಿಯೆಯಲ್ಲು ಬಿಂದಾಸ್ ಆಗಿ ಭಾಗಿಯಾಗಿದ್ದು ಎಂದು ತಿಳಿಸಿದರು.
ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಅವರ ಮಾರ್ಗದರ್ಶನದಲ್ಲಿ ಸುರಪುರ ಪಿಐ ಮತ್ತು ಶಹಾಪುರ ಶ್ರೀನಿವಾಸ ಅಲ್ಲಾಪುರ ನೇತೃತ್ವದಲ್ಲಿ ಗೋಗಿ ಠಾಣೆ ಪಿಎಸ್‍ಐ ಸೋಮಲಿಂಗ ಒಡೆಯರ್, ಭೀ.ಗುಡಿ ಪಿಎಸ್‍ಐ ಸಂತೋಷ ರಾಠೋಡ ಸೇರಿದಂತೆ ಎಎಸ್‍ಐ ಹಣಮಂತ, ಶ್ರೀಶೈಲ್, ಶರಣಗೌಡ, ಮಲ್ಲಿಕಾರ್ಜುನ, ಸುರೇಶ ಪಾಟೀಲ್, ಹಣಮಂತ್ರಾಯ, ಮಂಜುನಾಥ ಅವರನ್ನೊಳಗೊಂಡ ಪೊಲೀಸ್ ಸಿಬ್ಬಂದಿ ನಾಲ್ಕು ತಂಡಗಳನ್ನು ರಚಿಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅವರು ತಿಳಿಸಿದರು. ಪ್ರಕರಣ ಕುರಿತು ತನಿಖೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಆರೋಪಿ ಹನೀಫ್ ಬುಧವಾರ ಬಕ್ರೀದ್ ಹಬ್ಬದ ದಿನವೇ ಆತನ ಕೊಲೆಗೆ ಸ್ಕೆಚ್ ರೂಪಿಸಿ, ಅಂದು ಬೆಳಗಿನಜಾವ ಕೈಗೆ ಹ್ಯಾಂಡ್‍ಗ್ಲೋಸ್ ಹಾಕಿಕೊಂಡು ಕೈಯಲ್ಲಿ ಲಾಂಗ್ ಹಿಡಿದು ಖಾಸಿಂಸಾಬ ಬರುವದನ್ನೆ ಕಾಯ್ದು ಬೆಳಗ್ಗೆ ನಾಲ್ಕುವರೆ ಸಮಯದಲ್ಲಿ ಆತ ಬರುತ್ತಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿರುತ್ತಾನೆ. ರಸ್ತೆಗೆ ಆತ ಬರುತ್ತಿದ್ದಂತೆ ಬೈಕ್ ನಿಲ್ಲಿಸಿ ತಲೆಗೆ ಮಚ್ಚಿನಿಂದ ಹೊಡೆದಿದ್ದು, ಆತ ಸಮೀಪದ ನಿವೇಶನದಲ್ಲಿ ಬೀಳುತ್ತಿದ್ದಂತೆ ಮತ್ತೆ ಮಚ್ಚಿನಿಂದ ಹೊಡೆದಿದ್ದೇನೆ ಎಂದು ಆರೋಪಿ ಹನೀಫ್ ತಿಳಿಸಿದ್ದಾನೆ. ಪ್ರಕರಣ ಕುರಿತು ಒಬ್ಬನೇ ಆರೋಪಿ ಇದ್ದು, ಇನ್ನು ತನಿಖೆ ಮುಂದುವರೆಯಲಿದೆ.
-ಡಾ.ವೇದಮೂರ್ತಿ ಎಸ್ಪಿ. ಯಾದಗಿರಿ.