Homeಪ್ರಮುಖ ಸುದ್ದಿ

100 ಕಡೆ ಬಾಂಬ್ ಸ್ಫೋಟ ಸಂಚು: ದೇಶಾದ್ಯಂತ ಒಂದೇ ದಿನ ಭಯೋತ್ಪಾದಕ ಕೃತ್ಯಕ್ಕೆ ಯತ್ನಿಸಿದ್ದ ಐವರಿಗೆ ಶಿಕ್ಷೆ

ಭಾರತದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿತರಾಗಿದ್ದ ಐವರು ಭಯೋತ್ಪಾದಕರಿಗೆ ದೆಹಲಿ ಎನ್​ಐಎ ಕೋರ್ಟ್ ಜೈಲುಶಿಕ್ಷೆ ವಿಧಿಸಿದೆ. ಇದೇ ವೇಳೆ ಬೆಂಗಳೂರಿನ ನೇತ್ರತಜ್ಞ, ಶಂಕಿತ ಉಗ್ರ ಡಾ. ಅಬ್ದುರ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್ ವಿರುದ್ಧದ ಕೋರ್ಟ್ ವಿಚಾರಣೆ ಮುಂದುವರಿದಿದ್ದು, ಶಿಕ್ಷೆಗೆ ಒಳಗಾಗಿರುವ ಉಗ್ರರು ದೇಶದಲ್ಲಿ ಒಂದೇ ದಿನ 100 ಕಡೆ ಸುಧಾರಿತ (ಐಇಡಿ) ಬಾಂಬ್​ಗಳನ್ನು ಸ್ಪೋಟಿಸಲು ಸಂಚು ರೂಪಿಸಿದ್ದರೆಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ.

ಇದಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕಾಯ್ದೆ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಯುವಕರಿಗೆ ಉತ್ತೇಜನ ಕೊಟ್ಟಿದ್ದ ವಿಚಾರವೂ ಎನ್​ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಖೊರಸನ್ ಪ್ರಾವಿನ್ಸ್ (ಐಎಸ್​ಕೆಪಿ) ಸಂಘಟನೆಯ ಸದಸ್ಯರಾಗಿದ್ದ ಉಗ್ರರು, ಐಸಿಸ್ ಸಿದ್ಧಾಂತ ಪ್ರಚಾರ ಮಾಡುವ ಮುಖೇನ ದೇಶದಲ್ಲಿ ಹಿಂಸಾಚಾರವೆಸಗಲು ಸಂಚು ರೂಪಿಸಿದ್ದರು. ದೆಹಲಿಯ ಜಹನ್​ಜೇಬ್ ಸಮಿ ವಾನಿ ಮತ್ತು ಈತನ ಪತ್ನಿ ಹೀನಾ ಬಷೀರ್ ಬೇಗ್, ಪುಣೆಯ ಸಾದಿಯಾ ಅನ್ವರ್ ಶೇಕ್, ನಬೀಲ್ ಸಿದ್ಧಿಕ್ ಖಟ್ರಿ ಹಾಗೂ ಅಬ್ದುಲ್ಲಾ ಬಸಿತ್ ಶಿಕ್ಷೆಗೆ ಒಳಗಾದ ಭಯೋತ್ಪಾದಕರು. ಮೇ 6ರಂದು ತೀರ್ಪು ಪ್ರಕಟಗೊಂಡಿತ್ತು. ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬಂಧಿತನಾಗಿರುವ ಬೆಂಗಳೂರಿನ ಡಾ. ಬ್ರೇವ್ ವಿರುದ್ಧದ ವಿಚಾರಣೆ ಮುಂದುವರಿದಿರುವುದಾಗಿ ಎನ್​ಐಎ ಸ್ಪಷ್ಟಪಡಿಸಿದೆ.

ಸಿರಿಯಾದಲ್ಲಿ ಡಾ. ಬ್ರೇವ್ ಟ್ರೖೆನಿಂಗ್! : ಅಬ್ದುರ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ. ಬಳಿಕ ಉಗ್ರವಾದದತ್ತ ಹೊರಳಿದ್ದ. ಶಿಕ್ಷೆಗೆ ಗುರಿಯಾಗಿರುವ ಐವರು ಉಗ್ರರ ಜತೆ 2013ರ ಡಿಸೆಂಬರ್​ನಲ್ಲಿ ಸಿರಿಯಾಗೆ ಹೋಗಿದ್ದ. ಅಲ್ಲಿ ಐಸಿಸ್​ಗೆ ಸಂಬಂಧಪಟ್ಟಂತೆ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಐಸಿಸ್ ಉಗ್ರರು ಗಾಯಗೊಂಡರೆ ಅವರಿಗೆ ಚಿಕಿತ್ಸೆ ಕೊಡಲು ಮೆಡಿಕಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸುವುದನ್ನು ಕಲಿತಿದ್ದ. ಅದಲ್ಲದೆ ಲೇಸರ್ ಗೈಡೆಡ್ ಆಂಟಿ ಟ್ಯಾಂಕ್ ಮಿಸೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸುವುದರ ಬಗ್ಗೆಯೂ ತರಬೇತಿ ಪಡೆದಿದ್ದ ಎಂದು ಎನ್​ಐಎ ಹೇಳಿದೆ.

ಒಬ್ಬರಿಂದ ಒಬ್ಬರಿಗೆ ಲಿಂಕ್!: 2020ರ ಮಾ. 8ರಂದು ಜಹನ್​ಜೇಬ್ ಮತ್ತು ಹೀನಾಳನ್ನು ಬಂಧಿಸಿದ್ದ ದೆಹಲಿ ವಿಶೇಷ ಘಟಕದ ಪೊಲೀಸರು ಮಾ. 20ಕ್ಕೆ ಎನ್​ಐಎ ಕೇಸ್ ದಾಖಲಿಸಿತ್ತು. ವಿಚಾರಣೆ ವೇಳೆ ದಂಪತಿ ಕೊಟ್ಟ ಮಾಹಿತಿ ಮೇರೆಗೆ 2020ರ ಜು. 12ರಂದು ಸಾದಿಯಾ ಮತ್ತು ನಬೀಲ್​ನನ್ನು ಎನ್​ಐಎ ಬಂಧಿಸಿತ್ತು. 2020 ಆಗಸ್ಟ್​ನಲ್ಲಿ ಬೆಂಗಳೂರಿನಲ್ಲಿ ಡಾ. ಬ್ರೇವ್ ಸಿಕ್ಕಿಬಿದ್ದಿದ್ದ.

ಆತ್ಮಾಹುತಿ ದಾಳಿಗೆ ಲೇಡಿ ಸ್ಕೆಚ್? : 7 ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ಪುಣೆಯ ಸಾದಿಯಾ ಅನ್ವರ್ ಶೇಕ್ ಐಸಿಸ್ ಸದಸ್ಯೆ. ಎಲ್ಲ ಉಗ್ರಗಾಮಿ ಸಂಘಟನೆಗಳನ್ನು ಐಸಿಸ್ ಬ್ಯಾನರ್​ನಡಿಗೆ ತರಲು ಸಾದಿಯಾ ಪ್ರಯತ್ನಿಸಿದ್ದಳು. ಅಲ್ಲದೆ ಉಗ್ರ ಜಹನ್​ಜೇಬ್ ಮುಖಾಂತರ ಆತ್ಮಹತ್ಯೆ ಜಾಕೆಟ್ ಪಡೆಯಲು ಯತ್ನಿಸಿದ್ದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ ಎಂದು ಎನ್​ಐಎ ತಿಳಿಸಿದೆ.

ಯಾರಿಗೆ ಏನು ಶಿಕ್ಷೆ?

. ಜಹನ್​ಜೇಬ್​ಗೆ ಬೇರೆಬೇರೆ ಅಪರಾಧಕ್ಕೆ 3-20 ವರ್ಷವರೆಗೆ ಜೈಲು, ದಂಡ

. ಹೀನಾ ಬಷೀರ್​ಗೆ ಬೇಗ್​ಗೆ ಎರಡು ಅಪರಾಧಕ್ಕೆ 7 ವರ್ಷ ಜೈಲು ಸಜೆ

. ಅಬ್ದುಲ್ಲಾ ಬಸೀತ್ ಈಗಾಗಲೇ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ

. ಸಾದಿಯಾ ಅನ್ವರ್ ಶೇಕ್​ಗೆ 7 ವರ್ಷ ಜೈಲು ಶಿಕ್ಷೆ

. ನಬೀಲ್ ಸಿದ್ಧಿಕ್ ಖಟ್ರಿಗೆ 8 ವರ್ಷ ಜೈಲು ಸಜೆ ಜತೆಗೆ ದಂಡ

. ಡ್ರಾ. ಬ್ರೇವ್ ವಿರುದ್ಧದ ಎನ್​ಐಎ ಕೋರ್ಟ್ ವಿಚಾರಣೆ ಮುಂದುವರಿದಿದೆ

ಉಗ್ರರ ಏನೆಲ್ಲ ಸಂಚು ದೃಢ?

. ಸುಯಿಸೈಡ್ ಜಾಕೆಟ್ ತರಿಸಿ ಆತ್ಮಾಹುತಿ ದಾಳಿಗೆ ಸಂಚು

.ಉಗ್ರ ಕೃತ್ಯಕ್ಕೆ ಶಸ್ತ್ರಾಸ್ತ್ರ ಖರೀದಿ, ಟ್ರಯಲ್ ಬ್ಲಾಸ್ಟ್ ಪ್ರಯೋಗ

. ಸಿಎಎ/ಎನ್​ಆರ್​ಸಿ ವಿರೋಧಿ ಪ್ರತಿಭಟನೆಗೆ ಹುನ್ನಾರ

. ಐಸಿಸ್ ಸಿದ್ಧಾಂತ ಪ್ರಚಾರಕ್ಕಾಗಿ ಕ್ರಿಪ್ಟೋ ಕರೆನ್ಸಿ ನೆರವು ಬಳಕೆ

. ಐಸಿಸ್ ಪ್ರಚಾರಕ್ಕೆ ಮ್ಯಾಗಜಿನ್ ವಾಯ್ಸ್​ ಆಫ್ ಹಿಂದ್ ಸಿದ್ಧ

ಶಂಕಿತ ಭಯೋತ್ಪಾದಕ ಡಾ. ಬ್ರೇವ್ ವಿಚಾರಣೆ ಬಾಕಿ

. ಉಗ್ರ ಕೃತ್ಯ ದೃಢವಾದ್ದರಿಂದ ದೆಹಲಿ ಎನ್​ಐಎ ಕೋರ್ಟ್​ನಿಂದ ಸಜೆ

. ಐಸಿಸ್ ಉಗ್ರರ ಚಿಕಿತ್ಸೆಗೆ ಮೆಡಿಕಲ್ ಆಪ್ ಅಭಿವೃದ್ಧಿಪಡಿಸಿದ್ದ ಬ್ರೇವ್

. ಕ್ರಿಪ್ಟೋ ಕರೆನ್ಸಿ ಮೂಲಕ ಆರ್ಥಿಕ ಪಡೆದಿರುವ ಬಗ್ಗೆ ಎನ್​ಐಎ ಉಲ್ಲೇಖ

Related Articles

Leave a Reply

Your email address will not be published. Required fields are marked *

Back to top button