ನಗರದಲ್ಲಿ ಹೆಚ್ಚಿದ ಡೆಂಗ್ಯೂ ಭೀತಿ: 13 ದಿನಗಳಲ್ಲಿ 172 ಕೇಸ್ ಪತ್ತೆ
ಬೆಂಗಳೂರು: ಮಳೆ ಆರಂಭವಾಗುತ್ತಿದ್ದಂತೆಯೇ ನಗರದಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗುತ್ತಿದ್ದು, ಮೇ 1ರಿಂದ 13ರವರೆಗೆ ಒಟ್ಟು 172 ಡೆಂಗೆ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಪೂರ್ವ ವಲಯದ ರಾಮಸ್ವಾಮಿಪಾಳ್ಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು, ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಜತೆಗೆ ಔಷಧ ಸಿಂಪಡಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಜಾಸ್ತಿಯಾಗಲಿದ್ದು, ಫಾಗಿಂಗ್ ಮತ್ತು ಔಷಧ ಸಿಂಪಡಣೆ ಮೂಲಕ ನಿಯಂತ್ರಿಸಬೇಕಿದೆ. ಹೂವಿನ ಕುಂಡಗಳು, ಬಿಸಾಡಿದ ಟೈರ್‌ಗಳು, ನೀರು ಸಂಗ್ರಹ ತೊಟ್ಟಿ, ನೀರಿನ ಬಾಟಲಿ ಸೇರಿದಂತೆ ಇತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ, ಇಂತಹ ಕಡೆ ನೀರು ಸಂಗ್ರಹವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ವಾರ್ಡ್‌ನಲ್ಲಿ 4 ಔಷಧಿ ಸಿಂಪಡಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದರು.