‘ವಾತ್ಸಲ್ಯ’ ಯೋಜನೆಯಡಿ ಅಶಕ್ತರಿಗೆ ಸೂರು – ಕಮಲಾಕ್ಷ
ನೂತನ ವಾತ್ಸಲ್ಯ ಮನೆ ಉದ್ಘಾಟನೆ
yadgiri, ಶಹಾಪುರಃ ವಿಭಜಿತ ವಡಿಗೇರಿ ತಾಲೂಕು ವ್ಯಾಪ್ತಿಗೆ ಬರುವ ಹಯ್ಯಾಳ(ಬಿ) ಗ್ರಾಮದ ಅಶಕ್ತ ಅಂಧ ಮಹಿಳೆ ದೇವಿಂದ್ರಮ್ಮ (70) ಎಂಬ ಮಹಿಳೆಗೆ ಸೂರು ಇಲ್ಲದ್ದನ್ನು ಗಮನಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ‘ವಾತ್ಸಲ್ಯ’ ಯೋಜನೆಯಡಿ ಸಂಸ್ಥೆಯಿಂದ ಸೂರು ಕಲ್ಪಿಸಿ ಸಂಸ್ಕಾರಯುತವಾಗಿ ಪೂಜೆ ಸಲ್ಲಿಸುವ ಮೂಲಕ ನೂತನ ಮನೆ ಉದ್ಘಾಟಿಸಿ ದೇವಿಂದ್ರಮ್ಮಳಿಗೆ ಹಸ್ತಾಂತರ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ಅವರು, ಧರ್ಮಸ್ಥಳ ಸಂಸ್ಥೆ ಜಿಲ್ಲಾದ್ಯಂತ ನಿರಾಶ್ರಿತ ಅಶಕ್ತರನ್ನು ಗುರುತಿಸಿ ಸಂಸ್ಥೆಯ ಮಾತೋಶ್ರೀ ಹೇಮಾವತಿ ಅಮ್ಮನವರ ಚಿಂತನೆಯಂತೆ ವಾತ್ಸಲ್ಯ ಯೋಜನೆಯಡಿ ಸೂರು ಕಲ್ಪಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಸಂಸ್ಥೆಯಿಂದ ಈ ವರ್ಷ 10 ಮನೆಗಳನ್ನು ಕಳೆದ ವರ್ಷ 7 ಮನೆಗಳನ್ನು ಅಶಕ್ತರಿಗೆ ಕಲ್ಪಿಸಲಾಗಿದೆ.
ಅಶಕ್ತರು ಕೊನೆಗಳಿಗೆಯಲ್ಲಿ ಸಂತೋಷದಿಂದ ಸಮಯವನ್ನು ಕಳೆಯಲಿ. ಈ ಸೂರು ವ್ಯವಸ್ಥೆಯಿಂದ ತಕ್ಕ ಮಟ್ಟಿಗೆ ಅವರಿಗೆ ನೆರಳು, ಮಲಗಲು ಒಂದಿಷ್ಟು ನೆಮ್ಮದಿಯಾದರೂ ದೊರೆಯಲಿ ಎಂಬ ಕಾರಣಕ್ಕೆ ಮಾತೋಶ್ರೀಗಳ ನಿರ್ದೇಶನದಂತೆ ಸಂಸ್ಥೆ ಈ ಯೋಜನೆಗೆ ಚಾಲನೆ ನೀಡಿದೆ. ಈಗಾಗಲೇ ಕರ್ನಾಟಕದಲ್ಲಿ ನೂರಾರು ಇಂತಹ ಮನೆಗಳನ್ನು ಕಟ್ಟಿಸಿಕೊಡಲಾಗಿದೆ ಅಲ್ಲದೆ ಜತೆಗೆ ಅವರಿಗೆ ಪ್ರತಿ ಮಾಸಿಕ ವೇತನವು ಸಹ ಕಲ್ಪಿಸಲಾಗಿದೆ ಎಂದರು.
ವಾತ್ಸ್ಯಲ್ಯ ಮನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ತುಳಜಾರಾಮ ಮತ್ತು ಶಹಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಜಂಟಿಯಾಗಿ ಉದ್ಘಾಟಿಸಿದರು. ತಾಲೂಕು ಯೋಜನಾ ನಿರ್ದೇಶಕ ಕಲ್ಲಪ್ಪ ಯಾವಗಲ್ ಸೇರಿದಂತೆ ರೇಣುಕಾ ಸಂಸ್ಥೆಯ ಸಿಬ್ಬಂದಿ ಮತ್ತು ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.
ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ. ವಾತ್ಸಲ್ಯ ಯೋಜನೆಯಡಿ ಸೂರು ಕಲ್ಪಿಸಿ ಪಾರಂಪರೆಯಂತೆ ಧಾರ್ಮಿಕ ಕಾರ್ಯಕ್ರಮ ಮೂಲಕ ಮನೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮತ್ತು ನೂತನ ಗೃಹದಲ್ಲಿ ಹಾಲು ಉಕ್ಕಿಸಿ ಮನೆ ಹಸ್ತಾಂತರ ವೇಳೆ ಅಶಕ್ತಳೆಂಬ ಕಾರಣ ವಾತ್ಸಲ್ಯ ಕಿಟ್ ಅದರಲ್ಲಿ ಹೊದಿಕೆ, ಮನೆ ಅಡುಗೆಗೆ ಬೇಕಾಗುವ ಸಾಮಾಗ್ರಿಗಳು ಸಹ ವಿತರಣೆ ಮಾಡಲಾಗುತ್ತಿದೆ. ಇದೊಂದು ಉತ್ತಮ ಕೊಡುಗೆ ಸರ್ಕಾರ ಮತ್ತು ಯಾವುದೇ ಸಂಘ ಸಂಸ್ಥೆಗಳು ಮಾಡಲಾಗದ ಕೆಲಸ ಶ್ರೀ ಸಂಸ್ಥೆ ಮಾಡುತ್ತಿದೆ. ಅಲ್ಲದೆ ಮಾಸಾಶನ ಸಹ ಒದಗಿಸಲಾಗುತ್ತಿದೆ. ಇಲ್ಲಿ ಸಾಕ್ಷಾತ್ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿದೆ.
-ಮಲ್ಲಿಕಾರ್ಜುನ ಮುದ್ನೂರ